– ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ ‘ದೋಸ್ತಿ’ ನಾಯಕರು
– ಎಲ್ಲಾ ಬಂಡೆಗಳು ಪುಡಿಯಾಗುತ್ತವೆ: ಡಿಕೆಶಿಗೆ ಟಾಂಗ್ ಕೊಟ್ಟ ಶ್ರೀರಾಮುಲು
ಮೈಸೂರು: ಮುಡಾ, ವಾಲ್ಮೀಕಿ ಹಗರಣ ವಿರುದ್ಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ (BJP-JDS) ಜೊತೆಯಾಗಿ ಹಮ್ಮಿಕೊಂಡಿರುವ ‘ಮೈಸೂರು ಚಲೋ’ (Mysuru Chalo) ಪಾದಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ ನಡೆಯುತ್ತಿದೆ.
Advertisement
ಅರಮನೆ ಸಮೀಪದ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆ ಹೊರಟು ಮಹಾರಾಜ ಕಾಲೇಜು ಮೈದಾನಕ್ಕೆ ಬಂದರು. ಬಳಿಕ ಸಮಾವೇಶದಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ: ವಿಜಯೇಂದ್ರ
Advertisement
Advertisement
ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಮಾಜಿ ಡಿಸಿಎಂ ಶ್ರೀರಾಮುಲು, ವಿಪಕ್ಷ ನಾಯಕ ಆರ್.ಅಶೋಕ್ ಸಮಾವೇಶದಲ್ಲಿ ಭಾಗವಹಿಸಿದ್ದರು.
Advertisement
ಸಮಾವೇಶದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಶ್ರೀರಾಮುಲು, ನಿನ್ನೆ ಸಿದ್ದರಾಮಯ್ಯ ಭಾಷಣದಲ್ಲಿ ಸಿಎಂ ಧ್ವನಿ ಕುಗ್ಗುತ್ತಿತ್ತು. ಆಡಳಿತ ಪಕ್ಷವೊಂದು ಪ್ರತಿ ಪಕ್ಷದ ಸಮಾವೇಶಕ್ಕೆ ಪರ್ಯಾಯವಾಗಿ ಸಮಾವೇಶ ಮಾಡಿದ್ದು ದುರಂತ. ಹಿಂದುಳಿದ ವರ್ಗದವನು ಎಂಬ ಕಾರಣಕ್ಕೆ ತಮ್ಮನ್ನು ಇಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನಿಮ್ಮನ್ನು ಅಧಿಕಾರದಿಂದ ಇಳಿಸಲು ಯತ್ನಿಸುತ್ತಿರೋದು ಡಿ.ಕೆ.ಶಿವಕುಮಾರ್. ವಾಲ್ಮೀಕಿ ನಿಗಮದ ಒಂದೊಂದು ಪೈಸೆಯೂ ಕೂಡ ವಾಪಸ್ ಬರಬೇಕು. ಪ.ಜಾತಿ, ಪಂಗಡಗಳ ಹಣವನ್ನು ಗ್ಯಾರಂಟಿ ಹಣಕ್ಕೆ ಕೊಡುತ್ತಿದ್ದಾರೆ. ಇದಕ್ಕೆ ಎಸ್ಸಿ-ಎಸ್ಟಿ ಗ್ಯಾರಂಟಿ ಹಣ ಅಂತಾ ಹೆಸರಿಡಿ. ನೀವು 14 ವರ್ಷದ ಹಿಂದೆ ನಮ್ಮ ವಿರುದ್ಧ ಬಳ್ಳಾರಿ ಪಾದಯಾತ್ರೆ ಮಾಡಿದ್ದೀರಿ. ಈಗ ನಿಮ್ಮ ಹಗರಣ ವಿರುದ್ಧ ಈಗ ನಾವು ಪಾದಯಾತ್ರೆ ಮಾಡ್ತಿದ್ದೇವೆ. ಕಾಲ ಚಕ್ರ ಉರುಳಿತು ನೋಡಿ. ಸಿದ್ದರಾಮಯ್ಯ ಅವರೇ ಚಾಮುಂಡಿ ತಾಯಿ ನಿಮ್ಮನ್ನು ಬಿಡುವುದಿಲ್ಲ. ಜಗ್ಗಲ್ಲ ಬಗ್ಗಲ್ಲ ಅಂತೀರಿ. ಕೆಲವರು ಬಂಡೆ ಅನ್ನುತ್ತಾರೆ. ನಮ್ಮ ಕಾರ್ಯಕರ್ತರ ಶಕ್ತಿ ಮುಂದೆ ಎಲ್ಲರೂ ಬಗ್ಗಬೇಕು. ಎಲ್ಲಾ ಬಂಡೆಗಳು ಪುಡಿ ಆಗುತ್ತವೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: 100 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಕತ್ತಲೆ ಭಾಗ್ಯ; ಟಾರ್ಚ್ ಬೆಳಕಲ್ಲೇ ವರ್ತಕರ ವಹಿವಾಟು
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಶವಯಾತ್ರೆಯ ಪಾದಯಾತ್ರೆ ಇದು. ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳು ಸಾವು ಉಚಿತ. ರೈತರಿಗೆ ಸಾವು ಉಚಿತ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಧಿಕಾರದಲ್ಲಿ ಇರುವ ತನಕ ಪ್ರಾಮಾಣಿಕ ಅಧಿಕಾರಿಗಳ ಜೀವಕ್ಕೆ ಇಲ್ಲಿ ರಕ್ಷಣೆ ಇಲ್ಲ. ವಿಧಾನಸೌಧದಿಂದ ಸಿದ್ದರಾಮಯ್ಯ ಓಡಿ ಹೋಗಿದ್ದಕ್ಕೆ ನಾವು ಪಾದಯಾತ್ರೆ ಮಾಡಿದ್ದೇವೆ. ಸಿಎಂ ರಾಜೀನಾಮೆ ಕೊಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರವಾಲ್ ಮಾತನಾಡಿ, ನಿನ್ನೆ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಒಂದು ಸಾವಿರ ಒಬ್ಬರಿಗೆ ಕೊಟ್ಟು ಜನರನ್ನು ಕರೆಸಲಾಗಿತ್ತು. ನಮ್ಮ ಪಾದಯಾತ್ರೆಗೆ ಹೆದರಿ ದುಡ್ಡು ಖರ್ಚು ಮಾಡಿ ಸಮಾವೇಶ ಮಾಡುವ ಅಗತ್ಯ ಕಾಂಗ್ರೆಸ್‌ಗೆ ಇತ್ತಾ? ಕಾಂಗ್ರೆಸ್ ಯಾವಾಗಲೂ ಲೂಟಿ ಮಾಡುವುದು ಲೂಟಿ ಮಾಡಿದ ಹಣವನ್ನು ಹೀಗೆ ಖರ್ಚು ಮಾಡುವುದು ಕಾಂಗ್ರೆಸ್ ಅಭ್ಯಾಸ. ನಿನ್ನೆಯ ಕಾಂಗ್ರೆಸ್ ರ‍್ಯಾಲಿ ಲೂಟಿ ರ‍್ಯಾಲಿ. ನಮ್ಮದು ಜನತಾ ರ‍್ಯಾಲಿ. ಸಿದ್ದರಾಮಯ್ಯ ತಮ್ಮ ಸ್ಥಾನ ಖಾಲಿ ಮಾಡುವವರೆಗೂ ಜನರ ಜೊತೆ ಸೇರಿ ಹೋರಾಟ ಮಾಡುತ್ತೇವೆ. ಡಿಕೆ ಶಿವಕುಮಾರ್ ಇತಿಹಾಸ ಯಾರಿಗೆ ಗೊತ್ತಿಲ್ಲ ಹೇಳಿ? ಡಿಕೆ ಶಿವಕುಮಾರ್ ಆಸ್ತಿ ಮೊದಲು ಎಷ್ಟಿತ್ತು? ಈಗ ಎಷ್ಟಾಗಿದೆ? ಡಿಕೆ ಶಿವಕುಮಾರ್‌ಗೆ ಇಷ್ಟು ಹಣ ಎಲ್ಲಿಂದ ಬಂತು? ಕರ್ನಾಟಕವನ್ನು ಡಿ.ಕೆ. ಶಿವಕುಮಾರ್ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.