ಬಿಜೆಪಿ, ಜೆಡಿಎಸ್ ನಾಯಕರು ರಾಜಕೀಯಕ್ಕಾಗಿ ಮಾತನಾಡಿದ್ದೆಂದು ನನ್ನ ಬಳಿ ಸತ್ಯ ಒಪ್ಪಿಕೊಂಡಿದ್ದಾರೆ: ಡಿ ಸುಧಾಕರ್

Public TV
2 Min Read
d sudhakar 1

ಚಿತ್ರದುರ್ಗ: ನನ್ನ ವಿರುದ್ಧದ ಭೂಕಬಳಿಕೆ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಚಿತ್ರದುರ್ಗದಲ್ಲಿ (Chitradurga) ಸಾಂಖಿಕ ಹಾಗೂ ಯೋಜನೆ ಸಚಿವ ಡಿ ಸುಧಾಕರ್ (D Sudhakar) ಹೇಳಿದರು.

ಚಿತ್ರದುರ್ಗದ ಡಿಸಿಸಿ ಬ್ಯಾಂಕ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ವಿರುದ್ಧದ ಪ್ರಕರಣ ರದ್ದತಿಗೆ ಅರ್ಜಿ ಸಲ್ಲಿಸಿದ್ದೆವು. ಇಂದು ಹೈಕೋರ್ಟ್ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ. ಈ ಬಗ್ಗೆ ಹೈಕೋರ್ಟ್ನಲ್ಲಿರುವ ನಮ್ಮ ವಕೀಲರಿಂದ ಈಗ ಮಾಹಿತಿ ಸಿಕ್ಕಿದೆ. ತಡೆಯಾಜ್ಞೆಯ ದಾಖಲೆ ನಮ್ಮ ವಕೀಲರ ಬಳಿ ಇದೆ ಎಂದು ತಿಳಿಸಿದರು.

ಇದು ನನ್ನ ವಿರುದ್ಧದ ಭೂ ಕಬಳಿಕೆ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜಕೀಯಕ್ಕಾಗಿ ನಾವು ಮಾತನಾಡಿರುವುದಾಗಿ ನನ್ನ ಹತ್ತಿರ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಇನ್ನು ಆಕ್ರಮ ಭೂ ಕಬಳಿಕೆ ಪ್ರಕರಣ ಸಂಬಂಧ ಈ ವರೆಗೆ ನನಗೆ ಪೊಲೀಸ್ ಇಲಾಖೆಯಿಂದ ಯಾವುದೇ ನೋಟಿಸ್ ಬಂದಿಲ್ಲ. ನಾನು ಈ ನೆಲದ ಕಾನೂನನ್ನು ಗೌರವಿಸುತ್ತಿರುವುದರಿಂದ ಪೊಲೀಸರ ನೋಟಿಸ್ ಬಂದರೆ ಉತ್ತರ ನೀಡುತ್ತೇನೆ ಎಂದರು.

D Sudhakar

ನನ್ನ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತವಾಗಿದೆ. ಮೊಸರಲ್ಲಿ ಕಲ್ಲು ಹುಡುಕಿದರೆ ಯಶಸ್ವಿ ಆಗುತ್ತಾರಾ? ಸತ್ಯ ಯಾವತ್ತಿದ್ದರೂ ಗೆಲ್ಲಲೇಬೇಕು. ಸತ್ಯಾಂಶ ತಿಳಿಯದೆ, ದಾಖಲೆ ನೀಡದೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಅಲ್ಲದೆ ಬಿಜೆಪಿ ಹಾಗೂ ಜೆಡಿಎಸ್‌ನ ಕೆಲ ಸ್ನೇಹಿತರ ಜೊತೆ ನಾನು ವೈಯಕ್ತಿಕವಾಗಿ ಮಾತಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಾವು ಯಾರು ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿಲ್ಲ: ಶೋಭಾ ಕರಂದ್ಲಾಜೆ

ನಮ್ಮ ದೇಶದ ಪ್ರಜಾಪ್ರಭುತ್ವ ಶಕ್ತಿಯುತವಾಗಿದೆ. ತಪ್ಪು ಮಾಡಿದರೆ ಒಂದು ಕ್ಷಣ ಇರಲಾಗುವುದಿಲ್ಲ. ಎಷ್ಟೋ ಜನ ಅಪರಾಧಿಗಳು ತಪ್ಪಿಸಿಕೊಳ್ಳಲಿ, ಆದರೆ ಓರ್ವ ನಿರಪರಾಧಿಗೆ ಶಿಕ್ಷೆ ಆಗಬಾರದು. 60 ವರ್ಷಗಳಿಂದ ನನ್ನ ಜೀವನವನ್ನು ಜನ ಗಮನಿಸಿದ್ದಾರೆ. ಒಳ್ಳೆಯ ವ್ಯಕ್ತಿ ಎಂಬ ಕಾರಣಕ್ಕೆ 4 ಬಾರಿ ಚುನಾವಣೆಯಲ್ಲಿ ಈ ಜಿಲ್ಲೆಯ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅಲ್ಪ ಸಂಖ್ಯಾತನಾಗಿದ್ದರೂ ಪ್ರಾಮಾಣಿಕತೆ ಸೇವೆ ಗುರುತಿಸಿದ್ದಾರೆ ಎಂದು ಹೇಳಿದರು.

2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ನಾನು ಸಚಿವ ಆಗಿದ್ದೆ. ಆಗ ಸಿಬಿಐ ನನ್ನ ವಿರುದ್ಧ ಪ್ರಕರಣ ದಾಖಲು ಮಾಡಿತ್ತು. ಬಿಜೆಪಿ ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿತ್ತಾ? ಕೇವಲ ರಾಜಕಾರಣಕ್ಕಾಗಿ ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ನಾನು ಪಾರದರ್ಶಕವಾಗಿದ್ದೇನೆ. ನನಗೆ ಭಯವೇಕೆ? ಇಂದು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವರ ದರ್ಶನ ಮಾಡಿ, ಬರಗಾಲ ತೊಲಗಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ಸಚಿವರು ತಿಳಿಸಿದರು. ಇದನ್ನೂ ಓದಿ: 8 ಎಕರೆ ಜಮೀನು ಖರೀದಿ, ಪೆಟ್ರೋಲ್ ಬಂಕ್ ನಿರ್ಮಾಣ – ಅಭಿನವ ಹಾಲಾಶ್ರೀ ಈಗ ನಾಪತ್ತೆ

Web Stories

Share This Article