– ಮುಖ್ಯಮಂತ್ರಿಯಿಂದಲೇ ಕಾನೂನು ಬಾಹಿರ ಚಟುವಟಿಕೆ ಆಗಿದೆ ಎಂದ ಹೆಚ್‌ಡಿಕೆ
– ಕಾಂಗ್ರೆಸ್ ಭ್ರಷ್ಟಾಚಾರ ಬಟಾಬಯಲು ಮಾಡುತ್ತೇವೆಂದ ಅಶೋಕ್
ಬೆಂಗಳೂರು: ಇದೇ ಜು.15 ರಿಂದ ವಿಧಾನ ಮಂಡಲ ಅಧಿವೇಶನ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿಂದು ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಡೆಸಲಾಯಿತು.
ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ, ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ, ಸುರೇಶ್ ಬಾಬು, ಶಾರದಾ ಪೂರ್ಯಾ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಕೆ.ಎಸ್ ನವೀನ್ ಸೇರಿದಂತೆ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಜಂಟಿ ಹೋರಾಟದ ಬಗ್ಗೆ ಹಾಗೂ ಹೋರಾಟಕ್ಕೆ ಸಿದ್ದಪಡಿಸಬೇಕಾದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್, ಅಧಿವೇಶನದಲ್ಲಿ ಮೊದಲ ಬಾರಿಗೆ ಎನ್‌ಡಿಎ ಆಗಿ ಜಂಟಿಯಾಗಿ ಸರ್ಕಾರದ ವಿರುದ್ಧ ಬಿಸಿ ಮುಟ್ಟುವ ಕೆಲಸ ಮಾಡಬೇಕಿದೆ. ಎಲ್ಲಾ ವಿಚಾರಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಶಕ್ತಿ ಸಿಕ್ಕಿದೆ. ಮುಡಾ ಹಗರಣದಲ್ಲಿ ಸಿಎಂ ಭಾಗಿಯಾಗಿರುವುದರಿಂದ ಇದು ದೇಶದ ವಿಚಾರವಾಗಿದೆ. ಸಿಎಂ 10 ವರ್ಷ ನಾನು ಜಮೀನೇ ನೋಡಿಲ್ಲ ಅನ್ನೋದು ಸಂಶಯಾಸ್ಪದವಾಗಿದೆ. ಕಾಂಗ್ರೆಸ್ ಭ್ರಷ್ಟಾಚಾರ ಬಟಾಬಯಲು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಇನ್ನೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ಮುಖ್ಯಮಂತ್ರಿಯಿಂದಲೇ ಕಾನೂನು ಬಾಹಿರ ಚಟುವಟಿಕೆ ಆಗಿದೆ. 62 ಕೋಟಿ ರೂ. ಪರಿಹಾರ ಯಾವ ಆಧಾರದಲ್ಲಿ ಕೇಳಿದರು? ಎಷ್ಟು ಜನ ಭೂಮಿ ಕಳೆದುಕೊಂಡವರಿಗೆ ಇವರ ಸರ್ಕಾರದಲ್ಲಿ ಪರಿಹಾರ ಕೊಟ್ಟಿದ್ದಾರೆ? ಅರ್ಕಾವತಿ ರೀಡೂ ಮಾಡಿದ ಆಧಾರದಲ್ಲಿ 62 ಕೋಟಿ ರೂ. ಕೇಳಿರಬೇಕು ಅಂತಾ ನನ್ನ ಭಾವನೆ. ಇತರ ಎಲ್ಲಾ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಲು ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಸರ್ಕಾರದ ನಡವಳಿಕೆ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ತೀರ್ಮಾನಿಸಿದ್ದೇವೆ. ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕುಸಿತ ಅಂತಾ ಅರ್ಥಿಕ ತಜ್ಞ ರಾಯರೆಡ್ಡಿ ಹೇಳಿದ್ದಾರೆ. ಅಶೋಕ್ ನೇತೃತ್ವದಲ್ಲಿ ನಮ್ಮ ಎಲ್ಲಾ ಶಾಸಕರು ಚರ್ಚೆ ಮಾಡಿದ್ದೇವೆ. ಎರಡೂ ಸದನದಲ್ಲಿ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತೇವೆ ಎಂದು ಗುಡುಗಿದ್ದಾರೆ.