ಬೆಂಗಳೂರು/ರಾಮನಗರ: ರಾಜ್ಯದ ಜನತೆ 136 ಸ್ಥಾನಗಳನ್ನು ಗೆಲ್ಲಿಸಿ ಆಶೀರ್ವಾದ ಮಾಡಿರುವ ಸರ್ಕಾರವನ್ನು ಬಿಜೆಪಿಯವರು ರಾಜ್ಯಪಾಲರನ್ನು ಇಟ್ಟುಕೊಂಡು ಹೆದರಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬಿಡದಿಯಲ್ಲಿ ನಡೆದ ಕೇಂದ್ರ ಎನ್‌ಡಿಎ ಸರ್ಕಾರವು ಕರ್ನಾಟಕ್ಕೆ ಮಾಡುತ್ತಿರುವ ಅನ್ಯಾಯ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ಅವಧಿಯ ಭ್ರಷ್ಟಚಾರದ ವಿರುದ್ಧ ಜನಾಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರನ್ನು ಉದ್ದೇಶಿಸಿ ಪರಮೇಶ್ವರ್ ಮಾತನಾಡಿದರು.
Advertisement
Advertisement
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದ್ದೆವು. ಜನರಿಗೆ ಭರವಸೆಗಳನ್ನು ಕೊಟ್ಟಿದ್ದೆವು. ಭ್ರಷ್ಟಚಾರದಿಂದ ಕೂಡಿದ್ದ ಬಿಜೆಪಿಯನ್ನು ಕಿತ್ತೊಗೆದು ನಮಗೆ ಅಧಿಕಾರ ಕೊಡಿ. ಸಾಮಾಜಿಕ ನ್ಯಾಯ ನೀಡುವ ಆಡಳಿತ ನೀಡುವುದಾಗಿ ಹೇಳಿದ್ದೆವು. ಬಡವರು, ಶೋಷಿತರು, ಅಲ್ಪಸಂಖ್ಯಾತರನ್ನು ಮೇಲೆತ್ತಲು ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದೆವು. ಕಾಂಗ್ರೆಸ್ ಪಕ್ಷ ಪೊಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಬಿಜೆಪಿಯವರು ಟೀಕಿಸಿದ್ದರು. ಅಧಿಕಾರಕ್ಕೆ ಬಂದ ಕೂಡಲೇ ಭರವಸೆಗಳನ್ನು ಈಡೇರಿಸಿದ್ದೇವೆ. ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿ ಕಾರ್ಯಗಳೆಲ್ಲವು ಸುಸಜ್ಜಿತವಾಗಿ ನಡೆಯುತ್ತಿವೆ. ಇದೆಲ್ಲವನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್‌ನವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ಹರಿಹಾಯ್ದರು.
Advertisement
ಜನ 136 ಸೀಟುಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತವನ್ನು ನೀಡುತ್ತಿದೆ. ಇದೆಲ್ಲವನ್ನು ತಡೆಯಲು ಆಗದೆ ಹೊಟ್ಟೆಕಿಚ್ಚು, ಹೊಟ್ಟೆ ಹುರಿಯಿಂದ ಬಿಜೆಪಿಯವರು ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ಪಕ್ಷ 136 ಸೀಟು ಗೆದ್ದಿದ್ದಕ್ಕೆ, ರಾಜ್ಯದಲ್ಲಿ ನಮಗೆ ಜಾಗ ಇಲ್ಲ ಎಂದು ಜೆಡಿಎಸ್ ಮತ್ತು ಬಿಜೆಪಿಯವರಿಗೆ ಎಂಬುದು ಗೊತ್ತಾಗಿದೆ. ಇದೇ ಕಾರಣದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ಬಿಜೆಪಿಯೊಂದಿಗೆ ಕೈಜೋಡಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರು ಲಾಟ್ರಿ ಹೊಡೆದು, ಕೇಂದ್ರ ಸಚಿವರಾಗಿದ್ದಾರೆ. ನಮ್ಮ ಜೊತೆ ಸೇರಿಕೊಂಡು 14 ತಿಂಗಳ ನಂತರ ಬಿಟ್ಟು ಹೋದರು. ಮುಂದೆ ಬಿಜೆಪಿಯವರಿಗೆ ಗೊತ್ತಾಗಲಿದೆ. ನಿನ್ನೆ ನಡೆದ ಘಟನೆಯೇ ಇದಕ್ಕೆ ಸಾಕ್ಷಿ. ದಾರಿಯಲ್ಲಿ ಎಲ್ಲೂ ಜನತಾದಳ ಬಾವುಟಗಳು ಇಲ್ಲ. ಹೆಚ್ಚು ದಿನ ಅವರ ಮೈತ್ರಿ ಉಳಿಯುವುದಿಲ್ಲ. ಶೀಘ್ರವಾಗಿ ಮುರಿದು ಬೀಳುತ್ತದೆ ಎಂದು ಟೀಕಿಸಿದರು.
1935ರಲ್ಲಿ ಖರೀದಿ ಮಾಡಿದಂಥ ಜಮೀನನ್ನು ಮುಡಾದವರು ನಿವೇಶನ ಮಾಡಿದ್ದನ್ನು ಈಗ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಒಂದೇ ಒಂದು ಫೈಲ್‌ನಲ್ಲಿ ಸಹಿ ಮಾಡಿದ್ದರೆ, ಈ ಬಗ್ಗೆ ನಿರ್ದೇಶನ ನೀಡಿದ್ದರೆ ಬಿಜೆಪಿಯವರು ಸಾಬೀತುಪಡಿಸಲಿ. ಜನರಿಗೆ ಸತ್ಯವನ್ನು ತಿಳಿಸಬೇಕು ಎಂಬ ಉದ್ದೇಶದಿಂದ ಸಭೆ ನಡೆಸಿದ್ದೇವೆ. ಬಿಜೆಪಿಯವರ ಅಧಿಕಾರವಧಿಯಲ್ಲಿ ನಡೆದ ಹಗರಣಗಳ ಪಟ್ಟಿಯನ್ನು ನೀಡುತ್ತೇವೆ. ಅವರಿಗೆ ಸಾಧ್ಯವಾದರೆ ಪಟ್ಟಿ ನೀಡಲಿ ಎಂದು ಪರಮೇಶ್ವರ್ ಸವಾಲು ಹಾಕಿದರು.
ಕೋವಿಡ್ ಸಂದರ್ಭದಲ್ಲಿ ಜನರಿಗೆ ನೀಡಿದ ಔಷಧಿಯಲ್ಲಿ ಸುಧಾಕರ್ ನಾಲ್ಕು ಸಾವಿರ ಕೋಟಿ ರೂ. ದುಡ್ಡು ಹೊಡೆದಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದರು. ಭೋವಿ ನಿಗಮದಲ್ಲಿ 47 ಕೋಟಿ ರೂ. ಹಗರಣ ಆಗಿದೆ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ. ದೇವರಾಜು ಅರಸ್ ಟ್ರಕ್ ಟರ್ಮಿನಲ್‌ನಲ್ಲಿ ಡಿ.ಎಸ್.ವೀರಯ್ಯ ಚೆಕ್ ಮೂಲಕ ದುಡ್ಡು ತೆಗೆದುಕೊಂಡು ಮನೆ ಕಟ್ಟಿಸಿಕೊಂಡಿದ್ದಾರೆ. ಸಾವಿರಾರು ಕೋಟಿ ರೂ. ಲೂಟಿ ಹೊಡೆದು ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುವುದಕ್ಕೆ ನಾಚಿಕೆ ಆಗುವುದಿಲ್ಲವೆ ಎಂದು ಹರಿಹಾಯ್ದರು.
ಟಿ.ಜೆ.ಅಬ್ರಹಾಂ ಜುಲೈ 26ರಂದು ಗವರ್ನರ್‌ಗೆ ದೂರು ಕೊಟ್ಟಿದ್ದ. ಈ ಕುರಿತು ಸರ್ಕಾರದ ಮುಖ್ಯ ಆಯುಕ್ತರು ರಾಜ್ಯಪಾಲರಿಗೆ ಸ್ಪಷ್ಟವಾಗಿ ಉತ್ತರಿಸಿದ್ದರು. ಆದರೂ ಕೂಡಲೇ ಹೆದರಿಸುತ್ತೀರ? ಇತಿಹಾಸದಲ್ಲಿ ಇಲ್ಲದ ಶೋಕಾಸ್ ನೋಟಿಸ್ ನೀಡುತ್ತೀರ? ನೀವು ಮಾಡುತ್ತಿರುವುದು ತಪ್ಪು, ನೋಟಿಸ್ ವಾಪಸ್ ಪಡೆಯುವಂತೆ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರದಲ್ಲಿ ಯಾರು ಸಹ ತಪ್ಪು ಮಾಡಿಲ್ಲ. ಮುಂದಿನ ನಾಲ್ಕು ವರ್ಷವೂ ಸ್ವಚ್ಛವಾದ ಆಡಳಿತವನ್ನು ನೀಡುತ್ತೇವೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಇದೇ ವೇಳೆ ಪರಮೇಶ್ವರ್ ಹೇಳಿದರು.