ಚಿತ್ರದುರ್ಗ: ಹಿಂದೂ ಮುಸ್ಲಿಂ ನಡುವೆ ವಿಷ ಹಾಕಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ನಾ ಕಾವುಂಗಾ ನಾ ಖಾನೆದುಂಗಾ ಎನ್ನುತ್ತಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ರಾಜ್ಯ ಸರ್ಕಾರದಲ್ಲಿ ಶೇ.40 ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಪತ್ರ ಬರೆದಿದ್ದಾರೆ. ಆದರೆ ಆ ಪತ್ರಕ್ಕೆ ಇಲ್ಲಿಯವರೆಗೂ ಒಬ್ಬರೂ ಉತ್ತರಿಸಿಲ್ಲ ಎಂದು ವ್ಯಂಗ್ಯವಾಡಿದರು.
Advertisement
ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳಬೇಕಿದೆ. ಬಿಜೆಪಿಯವರು, ಅವರ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಹಿಜಬ್, ಜಟ್ಕಾ, ಹಲಾಲ್, ಅಜಾನ್ ವಿವಾದ ಸೃಷ್ಟಿಸಿದ್ದಾರೆ. ಈ ಹಿಜಬ್, ಅಜಾನ್ ನಿನ್ನೆ ಮೊನ್ನೆ ಬಂದಿದ್ದಾ? ನಮ್ಮ ಸಮಾಜ ಹುಟ್ಟಿದಾಗಿನಿಂದ ಇವೆಲ್ಲಾ ಇವೆ. ಹೀಗಾಗಿ ನಾವೆಲ್ಲಾ ಹಿಂದುಗಳಲ್ಲವೇ? ಇವರು ಮಾತ್ರ ಹಿಂದುಗಳಾ? ಎಂದು ಕಿಡಿಕಾರಿದರು. ಇದನ್ನೂ ಓದಿ: ಆಜಾನ್‌ನಿಂದ ವಿದ್ಯಾರ್ಥಿಗಳು, ವೃದ್ಧರು, ರೋಗಿಗಳಿಗೆ ತೊಂದರೆ ಆಗ್ತಿದೆ: ಈಶ್ವರಪ್ಪ
Advertisement
Advertisement
ನಾನು ಕೂಡಾ ಹಿಂದೂ. ಹಿಂದೂ ಅಲ್ಲ ಎಂದಾಗಿದ್ದರೆ ನಮ್ಮ ಅಪ್ಪ ನನಗೆ ಸಿದ್ದರಾಮಯ್ಯ ಎಂದು ಹೆಸರಿಡುತ್ತಿದ್ದರೇ? ನಾವು ಹಿಂದೂಗಳೇ. ಧರ್ಮದ ಬಗ್ಗೆ ನಮಗೂ ಗೌರವವಿದೆ. ಧರ್ಮ ಪರಧರ್ಮ ಸಹಿಷ್ಣುತೆ ಸಾರಿದೆ. ಹಾಗಾದರೆ ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್ ಯಾರು ಎಂದು ಸಭಿಕರನ್ನು ಪ್ರಶ್ನಿಸಿದರು.
Advertisement
ಇಂದು ಮನುವಾದ ಹುಟ್ಟು ಹಾಕಲು ಬಿಜೆಪಿ ಯತ್ನಿಸುತ್ತಿದೆ. ಇಷ್ಟೆಲ್ಲಾ ಹೇಳುವ ನಾವು, ಆಪರೇಷನ್ ಮಾಡಿಸಿಕೊಳ್ಳುವ ವೇಳೆ ಹಿಂದೂ ರಕ್ತವೇ ಬೇಕು ಎನ್ನುತ್ತೇವಾ? ಯಾರ ರಕ್ತವಾದರೂ ಆಗಲಿ ಎನ್ನುತ್ತೇವೆ ಅಲ್ವಾ? ದಲಿತ, ಮುಸಲ್ಮಾನ, ಮೇಲ್ಜಾತಿ ಎಂಬುದು ಅಮಾನವೀಯ ಎನಿಸಿದ್ದು. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ಬಿಜೆಪಿ ಹಾಳು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿಗೆ ಟಾಂಗ್:
ಇದೇ ವೇಳೆ ಸಿದ್ದರಾಮಯ್ಯ ಜೆಡಿಎಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧವೂ ಹರಿಹಾಯ್ದರು. ತಾಜ್ ವೆಸ್ಟೇಂಡ್ ಹೋಟೆಲ್‌ನಲ್ಲಿ ಉಳಿದುಕೊಂಡು ಹೆಚ್‌ಡಿಕೆ ಸರ್ಕಾರ ಕಳೆದುಕೊಂಡರು. ಆದರೆ ಸರ್ಕಾರ ಬೀಳಲು ಸಿದ್ಧರಾಮಯ್ಯ ಕಾರಣ ಎನ್ನುತ್ತಾರೆ. ಕೊಟ್ಟ ಕುದುರೆ ಏರದವನು ಎಂದು ನಮ್ಮ ಡಿಕೆಶಿ ಆಗಾಗ ಹೇಳುತ್ತಿರುತ್ತಾರೆ. ಹಾಗೆಯೇ ಕುಣಿಯಲಾರದವರು ನೆಲಡೊಂಕು ಎಂಬಂತೆ ಕುಮಾರಸ್ವಾಮಿ ಕಥೆಯಾಗಿದೆ ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ಅವರೇ ತಾಕತ್ ಇದ್ರೆ ನೇರಾ ನೇರ ಚರ್ಚೆಗೆ ಬನ್ನಿ: ಮುತಾಲಿಕ್
ಅಧಿಕಾರಕ್ಕಾಗಿ ಹವಣಿಸುತ್ತಾ ಬಿಜೆಪಿಯವರು ಮೊದಲೇ ಕಾದು ಕುಳಿತಿದ್ದರು. ಆಗ ಅನ್ನ ಹಳಸಿತ್ತು, ನಾಯಿ ಕಾದಿತ್ತು ಎಂಬಂತೆ ಆಯಿತು. ದುಡ್ಡು ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ಮಾಡಿದರು. ಆದರೆ ಈಗ ಹೆಚ್‌ಡಿಕೆ ಮುಸ್ಲಿಂ ಪರವಾಗಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಮುಸ್ಲಿಂ ಮತ ವಿಭಜನೆಗೆ ಉಪಚುನಾವಣೆಯಲ್ಲಿ ಅಭ್ಯರ್ಥಿ ಹಾಕಿದರು, ಇನ್ನು ಕೆಲವಡೆ ಅಭ್ಯರ್ಥಿಗಳನ್ನೇ ಬಿಜೆಪಿ ವಿರುದ್ಧ ಹಾಕಲಿಲ್ಲ. ಆದರೆ ಈಗ ಅಲ್ಪಸಂಖ್ಯಾತರ ಪರ ದ್ವನಿ ಎತ್ತುತಿದ್ದಾರೆ. ಆದರೂ ನಾವು ಎಷ್ಟೇ ತೊಂದರೆಯಾದರೂ ಅಲ್ಪಸಂಖ್ಯಾತರ ಪರವಾಗಿ ರಕ್ಷಣೆಗಾಗಿ ನಿಲ್ಲುತ್ತೇವೆ ಹಾಗೇನೆ ಹಿಂದೂ, ಕ್ರೈಸ್ತರ ಪರವಾಗಿ ಸಹ ನಿಲ್ಲುತ್ತೇವೆ ಎಂದರು.
ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಾದ ಜಯಂತಿ:
ಬಾಬು ಜಗಜೀವನ್ ರಾಮ್ ಜಯಂತಿ ಕಾ ಕಾರ್ಯಕ್ರಮ ಸಂಪೂರ್ಣ ಕಾಂಗ್ರೆಸ್ ಚುನಾವಣಾ ಪ್ರಚಾರದ ಸಮಾವೇಶವಾಯಿತು. ಭಾಷಣದ ಉದ್ದಕ್ಕೂ ಎಲ್ಲಾ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತ ಯಾಚನೆ ನಡೆಸಿದರು. ಮುಂಬರುವ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಆರಕ್ಕೆ ಆರು ವಿಧಾನಸಭೆ ಸ್ಥಾನಗಳನ್ನು ಗೆಲ್ಲಿಸುವಂತೆ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಡಿಕೆಶಿ ಹಾಗೂ ಸಿದ್ದರಾಮಯ್ಯ ಚುನಾವಣೆ ಪ್ರಚಾರದ ಭಾಷಣದಂತೆ ಬಿಜೆಪಿ ವಿರುದ್ಧ ವ್ಯಂಗ್ಯವಾಡುತ್ತಾ ನಗೆ ಚಟಾಕಿ ಹಾಗೂ ಆಕ್ರೋಶ ಭರಿತ ಮಾತುಗಳನ್ನಾಡಿದ್ದು, ಜಗಜೀವನ್ ರಾಮ್ ಜಯಂತಿ ಎನ್ನುವುದನ್ನು ಮರೆತು ಕಾಂಗ್ರೆಸ್ ನಾಯಕರು ಮತಯಾಚಿಸಿದರು.