ವಿಜಯಪುರ: ಸಿಂದಗಿ ಬೈ ಎಲೆಕ್ಷನ್‍ನ ಮತಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಅಭ್ಯರ್ಥಿ ರಮೇಶ್ ಭೂಸನೂರ ಸಂತಸ ವ್ಯಕ್ತಪಡಿಸಿದ್ದಾರೆ.
ಮತ ಎಣಿಕೆ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದೇವೆ. ಮೊದಲ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದೇನೆ. ಕಳೆದ ಬಾರಿ ನಾನು ಕಳೆದುಕೊಂಡಿದ್ದೆ. ಈ ಬಾರಿ ಪಡೆದುಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಮೊಸಳೆ ಕಣ್ಣೀರು ಸುರಿಸುವ ಕಾಲ ಹೋಯ್ತು. ಜನರಿಗೆ ಕೊಟ್ಟ ಭರವಸೆ ಯಾರು ಈಡೇರಿಸುತ್ತಾರೆ. ನಾವೀಗ ಭರವಸೆ ಕಾಲದಲ್ಲಿದ್ದೇವೆ. ಕಳೆದ ಬಾರಿ ಕಳೆದುಕೊಂಡಿರುವ ಅನುಕಂಪ ನನ್ನ ಮೇಲಿದೆ. ಜನರ ಒಲವು ನನ್ನ ಕಡೆ ಇದೆ. ಕಾಂಗ್ರೆಸ್‍ಗೆ ಅನುಕಂಪ ಇಲ್ಲ. 25 ಸಾವಿರ ಮತಗಳ ಅಂತರದಿಂದ ಗೆಲುವಿನ ವಿಶ್ವಾಸ ನನಗಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿಎಸ್‍ವೈ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಧನೆ ಗೆಲುವಿಗೆ ಕಾರಣ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ ಎಂಬ ಕಾಂಗ್ರೆಸ್ ಆರೋಪ ಮಾಡಿದೆ. ನಾವು ಪ್ರತ್ಯಾರೋಪ ಮಾಡಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ವತಃ ಹಣ ಹಂಚಿದ್ದು ನೀವು ನೋಡಿದ್ದೀರಿ. ನಾನು ಗ್ರಾಮ ಪಂಚಾಯಿತಿಯಿಂದ ವಿಧಾನಸಭೆಯವರೆಗೆ ಹೋಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ – ಕಾಂಗ್ರೆಸ್ ಮುನ್ನಡೆ
ಇದೀಗ ಮತ ಎಣಿಕೆ ಬಳಿ ಬಿಜೆಪಿ ಕಾರ್ಯಕರ್ತರು ಜೈಕಾರ ಹಾಕಿದ್ದರಿಂದ ಪೊಲೀಸರು ಕಾರ್ಯಕರ್ತರನ್ನು ಹೊರ ಕಳುಹಿಸಿ, ಮತ ಎಣಿಕೆ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.