ಬೆಂಗಳೂರು: ಲೋಕಸಭೆ ಚುನಾವಣೆಗೆ ಬೆಂಗಳೂರು ದಕ್ಷಿಣದಿಂದ ದಿವಂಗತ ಅನಂತ್ಕುಮಾರ್ ಅವರ ಪತ್ನಿ ತೇಜಸ್ವಿನಿಗೆ ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಹೇಳಿ, ಕೊನೆಗೆ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿರುವುದಕ್ಕೆ, ತೇಜಸ್ವಿನಿ ಅವರ ಅಭಿಮಾನಿಗಳು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೇಜಸ್ವಿನಿ ಅವರ ನಿವಾಸ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಅಭಿಮಾನಿಗಳು, ಅನಂತ್ಕುಮಾರ್ ಅವರು ಕೇಂದ್ರದಲ್ಲಿ ಉತ್ತಮ ಆಡಳಿತ ಮಾಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಹೆಸರನ್ನು ತಂದುಕೊಟ್ಟಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಲೋಕಸಭೆ ಚುನಾವಣೆಗೆ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡುವುದಾಗಿ ತಿಳಿಸಿ, ಕೊನೆ ಕ್ಷಣದಲ್ಲಿ ಮತ್ತೊಬ್ಬರನ್ನು ಅಭ್ಯರ್ಥಿಯಾಗಿ ಮಾಡಿರುವುದು ತಪ್ಪು. ಇದು ಅನ್ಯಾಯ. ಪಕ್ಷಕ್ಕೊಸ್ಕರ ದುಡಿದ ಪ್ರಭಾವಿ ನಾಯಕನ ಪತ್ನಿಗೆ ಟಿಕೆಟ್ ನೀಡದಿರುವುದು ಮೋಸ ಎಂದು ಕಿಡಿಕಾರಿದರು. ಇದನ್ನು ಓದಿ:ಮೂರು ದಿನದ ಹಿಂದೆ ತೇಜಸ್ವಿ ಸೂರ್ಯಗೆ ಮನವಿ ಮಾಡಿದ್ದ ತೇಜಸ್ವಿನಿ!
ರಾಜ್ಯಕ್ಕೆ ಒಳ್ಳೆದನ್ನ ಮಾಡಿದ್ದು ನೀವೊಬ್ಬರೆ ಎಂದು ಅನಂತ್ಕುಮಾರ್ ಅವರಿಗೆ ಹಾಡಿ ಹೊಗಳಿ ಈಗ ಅವರ ಮನೆಯವರಿಗೆ ಮೋಸ ಮಾಡುತ್ತಿರುವುದು ಕಾಣದ ಕೈಗಳ ಕೈವಾಡ. ತೇಜಸ್ವಿನಿ ಅವರು ಯಾವಾಗಲು ದೇಶ ಮೊದಲು, ಪಕ್ಷ ಹಾಗೂ ವ್ಯಕ್ತಿ ಅದರನಂತರ ಎಂದು ಹೇಳುತ್ತಾರೆ. ಅದಮ್ಯ ಚೇತನ ಎಂಬ ಸಾಮಾಜಿಕ ಸಂಸ್ಥೆ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದರೆ ಯಾವತ್ತು ಅವರು ಇದನ್ನೆಲ್ಲ ತೋರಿಸಿಕೊಂಡಿಲ್ಲ. ಅದಮ್ಯ ಚೇತನ ಸಂಸ್ಥೆ ಜೊತೆ ಹೊರಗೆಲ್ಲೂ ಕಾಣಿಸಿಕೊಂಡಿಲ್ಲ. ಇನ್ನು ಮುಂದಾದರು ಅವರು ನಮ್ಮೊಂದಿಗೆ ಕಾಣಿಸಿಕೊಳ್ಳಬೇಕು. ಆಗ ಅವರ ಕೆಲಸಗಳು ಜನರಿಗೆ ತಿಳಿಯುತ್ತದೆ ಎಂದು ಮನವಿ ಮಾಡಿದರು. ಇದನ್ನು ಓದಿ:ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯಗೆ ಬಿಜೆಪಿ ಟಿಕೆಟ್
ಬಳಿಕ ಕಳೆದ 30 ವರ್ಷಗಳಿಂದ ತೇಜಸ್ವಿನಿ ಅವರು ಅನಂತ್ಕುಮಾರ್ ಅವರ ಜೊತೆಗೂಡಿ ಜನಪರ ಕೆಲಸ ಮಾಡಿದ್ದಾರೆ. ಆದರೆ ಅದ್ಯಾವುದು ಬೆಳಕಿಗೆ ಬಂದಿಲ್ಲ. ತೆರೆಮರೆಯಲ್ಲಿದ್ದುಕೊಂಡೆ ತೇಜಸ್ವಿನಿ ಅವರು ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಅದ್ಯಾವುದಕ್ಕೂ ಇಗ ಬೆಲೆ ಇಲ್ಲದಂತಾಗಿದೆ. ಬಿಜೆಪಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಿ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.