ಹಾಸನ: ಕಾವೇರಿ ಜಲಾನಯನ ವ್ಯಾಪ್ತಿಯ ಸುಮಾರು ಐದೂವರೆ ಸಾವಿರ ಕೋಟಿ ರೂಪಾಯಿ ಕೆಲಸ ತಡೆ ಹಿಡಿಯುವ ಮೂಲಕ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳನ್ನು ಯಾಕೆ ತಡೆ ಹಿಡಿದಿದ್ದಾರೆ ಗೊತ್ತಿಲ್ಲ. ಈ ಭಾಗದಲ್ಲಿ ಬಿಜೆಪಿಗೆ ವೋಟ್ ಕೊಡಲ್ಲ ಅನ್ನುತ್ತಿದ್ದರು. ಆದರೆ ಈಗ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ನೀವು ದ್ವೇಷದ ರಾಜಕಾರಣ ಮಾಡಬೇಡಿ. ಅದು ನಿಮಗೆ ರಿವರ್ಸ್ ಆಗುತ್ತೆ. ಟೆಂಡರ್ ಆಗಿ ಮುಕ್ತಾಯ ಆಗುವ ಹಂತದಲ್ಲಿದ್ದ ಕೆಲಸಗಳನ್ನು ಬಿಜೆಪಿ ಅವರು ತಡೆ ಹಿಡಿದಿದ್ದಾರೆ ಎಂದು ರೇವಣ್ಣ ಸರ್ಕಾರದ ವಿರುದ್ಧ ಆಕ್ರೋಷ ಹೊರಹಾಕಿದರು.
Advertisement
Advertisement
ಅಷ್ಟೇ ಅಲ್ಲದೆ ನನಗೆ ಬಂದ ಮಾಹಿತಿ ಪ್ರಕಾರ ವಿಧಾನಸಭೆಯಲ್ಲಿ ಈ ಬಾರಿಯೂ ಪ್ರಶ್ನೋತ್ತರ ಅವಧಿ ತಡೆ ಹಿಡಿಯುತ್ತಾರೆ ಎನ್ನಲಾಗಿದೆ. ಸದಸ್ಯರ ಹಕ್ಕನ್ನು ತಡೆ ಹಿಡಿಯಬಾರದು ಎಂದು ಸ್ಪೀಕರ್ ಗೆ ಮನವಿ ಮಾಡುತ್ತೇನೆ. ಬಿಜೆಪಿ ಸರ್ಕಾರ ಬಂದ ನಂತರ ಸದಸ್ಯರ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಈ ಬಗ್ಗೆ ನಾವು ಸ್ಪೀಕರ್ ಗೆ ಪತ್ರ ಬರೆಯುತ್ತೇವೆ. ಬಿಜೆಪಿ ದ್ವೇಷದ ರಾಜಕಾರಣ ಮಾಡುವುದು ಬಿಡಬೇಕು. ಇಲ್ಲದಿದ್ದರೆ ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement
ಕುಮಾರಸ್ವಾಮಿ ಸರ್ಕಾರ ಹಾಗೂ ಸಿದ್ದರಾಮಯ್ಯ ಸರ್ಕಾರ ಅನುಮತಿ ಕೊಟ್ಟ ಟೆಂಡರ್ ತಡೆ ಹಿಡಿಯಲಾಗಿದೆ. ಇದೊಂದು ತಡೆ ಹಿಡಿಯುವ ಸರ್ಕಾರವಾಗಿದೆ ಎಂದು ರೇವಣ್ಣ ಅಸಮಾಧಾನ ಹೊರಹಾಕಿದರು. ಇದೇ ವೇಳೆ ಬಿಜೆಪಿ ಶಾಸಕರು ಸಂಪರ್ಕದಲ್ಲಿ ಇರುವ ಬಗ್ಗೆ ಮಾತನಾಡಲು ನಿರಾಕರಿಸಿದ ರೇವಣ್ಣ, ನನಗೆ ಸಂಪರ್ಕ ಎಂಬುದರ ಬಗ್ಗೆ ಗೊತ್ತಿಲ್ಲ. ಆದರೆ ನಾಳೆ ಬೆಳಗ್ಗೆ ಸುದ್ದಿಗೋಷ್ಠಿ ಮಾಡಿ ಅದರ ಬಗ್ಗೆ ಹೇಳುತ್ತೇನೆ ಎಂದು ಹಾರಿಕೆಯ ಉತ್ತರ ನೀಡಿದರು.