ಮಂಡ್ಯ: ಆಪರೇಷನ್ ಕಮಲಕ್ಕಿಂತ, ಮೈತ್ರಿ ಸರ್ಕಾರದ ಆಡಳಿತದಿಂದ ಬೇಸತ್ತು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಆಡಳಿತದಿಂದ ಬೇಸತ್ತು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದು, ಆಪರೇಷನ್ ಕಮಲವೂ ಕೊಂಚ ಇರಬಹುದು. ಆದರೆ ಅದೇ ಪ್ರಮುಖವಲ್ಲ. ಮೈತ್ರಿ ಸರ್ಕಾರದಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ವಿರೋಧ ಪಕ್ಷದ ನಾಯಕರ ಸ್ಥಾನದ ಕುರಿತು ಯಾವುದೇ ಗೊಂದಲವಿಲ್ಲ. ಈಗಾಗಲೇ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕರಾಗಿರುವುದರಿಂದ ವಿರೋಧ ಪಕ್ಷದ ನಾಯಕರಾಗಿಯೂ ಅವರೇ ಮುಂದುವರಿಯುತ್ತಾರೆ. ಈ ವಿಚಾರವಾಗಿ ಯಾವುದೇ ಕಿತ್ತಾಟ ಬರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
Advertisement
Advertisement
ಸ್ಪೀಕರ್ ಅನರ್ಹತೆ ಮಾಡುವ ಮುನ್ನ ಹಿಂದಿನ ರಾಜೀನಾಮೆ ಪ್ರಕರಣಗಳನ್ನು ಅಧ್ಯಯನ ಮಾಡಬೇಕಿತ್ತು. ಯಾವ ಆಧಾರದ ಮೇಲೆ ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ, ಹಿಂದಿನ ಪ್ರಕರಣಗಳನ್ನು ಪರಿಶೀಲಿಸಬೇಕಿತ್ತು ಎಂದು ಸ್ಪೀಕರ್ ನಿರ್ಧಾರದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
Advertisement
ಮೈತ್ರಿ ಪಕ್ಷದ 17 ಶಾಸಕರು ಅನರ್ಹರಾಗಿದ್ದು, ಹೀಗಾಗಿ ಮ್ಯಾಜಿಕ್ ನಂಬರ್ ತಲುಪಲು ಸದನದಲ್ಲಿ ಹಾಜರಿರುವ ಸದಸ್ಯರ ಸಂಖ್ಯೆ ಮುಖ್ಯ. ಬಿಜೆಪಿ ನೂರಕ್ಕೆ ನೂರರಷ್ಟು ಬಹುಮತ ಸಾಬೀತು ಪಡಿಸಲಿದೆ. ಯಡಿಯೂರಪ್ಪನವರು ನಮ್ಮ ಜಿಲ್ಲೆಯವರು. ಅವರಿಗೆ ಒಳ್ಳೆಯದಾಗಲಿ, ದೇವರು ಆಯಸ್ಸು, ಆರೋಗ್ಯ ಕರುಣಿಸಲಿ. ಈಗಾಗಲೇ ಬೂಕನಕೆರೆಗೆ ಆಗಮಿಸಿ ಗ್ರಾಮದ ಅಭಿವೃದ್ಧಿಗೆ ಅನುದಾನ ಘೋಷಿಸಿದ್ದಾರೆ. ಮುಂದೆ ಜಿಲ್ಲೆಗೆ ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
Advertisement
ಉಪ ಚುನಾವಣೆಯಲ್ಲಿ ಸ್ಪರ್ಧಿಸಲ್ಲ
ಈ ಹಿಂದೆಯೇ ಹೇಳಿದಂತೆ ನಾನು ಲೋಕಸಭೆ ಅಥವಾ ವಿಧಾನಸಭೆ ಯವುದೇ ರೀತಿಯ ಉಪ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಈಗಾಗಲೇ ಮಂಡ್ಯ ಆಯಿತು, ಕೆ.ಆರ್.ಪೇಟೆಗೆ ಕರೆಯುತ್ತಿದ್ದಾರೆ. ನಾಗಮಂಗಲದವರು ತಿರಸ್ಕರಿಸಿದರು ಎಂದು ಕೆ.ಆರ್.ಪೇಟೆಯವರು ಕರೆಯುತ್ತಿರಬಹುದು. ಜನರಿಗೆ ಚಿರಋಣಿ, ನಾನು ಮೊದಲೇ ಹೇಳಿದಂತೆ ಯಾವುದೇ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.