ನವದೆಹಲಿ: ಹರಿಯಾಣದಲ್ಲಿ ವೋಟ್ ಚೋರಿ (Vote Chori) ನಡೆದಿದೆ ಎಂಬ ರಾಹುಲ್ ಗಾಂಧಿ (Rahul Gandhi) ಆರೋಪವನ್ನು ಬಿಜೆಪಿ ವ್ಯಂಗ್ಯ ಮಾಡಿದೆ. ಯಾರಾದ್ರೂ ಗಂಟೆಗೆ 20 ಹಾಕುವುದಕ್ಕೆ ಸಾಧ್ಯವಾ ಎಂದು ಬಿಜೆಪಿ ಪ್ರಶ್ನಿಸಿದೆ.
ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಅವರು, ಹರಿಯಾಣದಲ್ಲಿ ದೊಡ್ಡ ಪ್ರಮಾಣದ ಮತದಾರರ ವಂಚನೆ ನಡೆದಿದೆ. ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಅಪಖ್ಯಾತಿಗೊಳಿಸುವ ಪ್ರಯತ್ನ ಎಂದು ಆರೋಪಿಸಿದ್ದರು. ಅದಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಇದನ್ನೂ ಓದಿ: ಹರಿಯಾಣದಲ್ಲಿ 25 ಲಕ್ಷ ಮತಗಳು ಕಳ್ಳತನ ಆಗಿದೆ – ರಾಹುಲ್ ಗಾಂಧಿ ಹೊಸ ಬಾಂಬ್
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ಮಾತನಾಡಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಭಾರತ ವಿರೋಧಿ ಶಕ್ತಿಗಳೊಂದಿಗೆ ಸೇರಿಕೊಂಡು ಭಾರತೀಯ ಚುನಾವಣಾ ಆಯೋಗ (ಇಸಿಐ), ನ್ಯಾಯಾಂಗ ಮತ್ತು ಸಶಸ್ತ್ರ ಪಡೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಹಾಳುಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಸೋಲುಗಳನ್ನು ಒಪ್ಪಿಕೊಳ್ಳುವ ಬದಲು ಕಾಂಗ್ರೆಸ್ ಇವಿಎಂಗಳು ಮತ್ತು ಇಸಿಐ ಅನ್ನು ದೂಷಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದೆ. ರಾಹುಲ್ ಗಾಂಧಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರತಿಯೊಂದು ರಾಜಕೀಯ ಪಕ್ಷವೂ ಚುನಾವಣೆಗೆ ಮೊದಲು ಮತದಾರರ ಪಟ್ಟಿಯ ಪ್ರತಿಗಳನ್ನು ಸ್ವೀಕರಿಸುತ್ತದೆ. ಆಗ ವ್ಯತ್ಯಾಸಗಳನ್ನು ಗುರುತಿಸಬಹುದು. ಯಾವುದೇ ತಪ್ಪು ಇದ್ದಲ್ಲಿ ಅಥವಾ ಅಧಿಕಾರಿಯೊಬ್ಬರು ತಪ್ಪು ಮಾಡಿದರೆ, ನಾವು ನ್ಯಾಯಾಲಯಗಳನ್ನು ಸಂಪರ್ಕಿಸಬಹುದು ಎಂದು ರಿಜಿಜು ತಿಳಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಮತದಾನಕ್ಕೆ ಒಂದು ದಿನ ಬಾಕಿ – ಜೆಡಿಯು ನಾಯಕನ ಮನೇಲಿ ಮೂವರು ಅನುಮಾನಾಸ್ಪದ ಸಾವು
ನಾವು ವಿರೋಧ ಪಕ್ಷದಲ್ಲಿದ್ದಾಗ ಎಂದಿಗೂ ನ್ಯಾಯಾಲಯಗಳು, ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡಿಲ್ಲ. ಪ್ರಜಾಪ್ರಭುತ್ವವನ್ನು ಪ್ರಶ್ನಿಸಿಲ್ಲ. ನಾವು ವ್ಯವಸ್ಥೆಯೊಳಗೆ ಹೋರಾಡಿ ಜನರ ವಿಶ್ವಾಸವನ್ನು ಗಳಿಸಿದ್ದೇವೆ ಎಂದು ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.


