ಬೆಂಗಳೂರು: ಮೈತ್ರಿ ಸರ್ಕಾರವನ್ನ ಉರುಳಿಸಲು ಮೆಗಾ ಸ್ಕೆಚ್ ನಡೆದಿದ್ದು, ಈಗಾಗಲೇ ಆಪರೇಷನ್ ಕಮಲಕ್ಕೆ ಬಿಜೆಪಿ ಹೈಕಮಾಂಡ್‍ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ಈ ಬಾರಿ ಆಪರೇಷನ್ ಕಮಲಕ್ಕೆ ಬಿಜೆಪಿ ಹೈಕಮಾಂಡ್ ಡೇಟ್ ಫಿಕ್ಸ್ ಮಾಡಿದೆ. ಸದ್ಯಕ್ಕೆ ಸುಮ್ಮನಿರಿ, ಒಂದು ತಿಂಗಳ ಬಳಿಕ ಆಟ ಚಾಲೂ ಮಾಡಿ ಸರ್ಕಾರ ಬೀಳಿಸಿ. ಆಮೇಲೆ ನಮ್ಮ ಆದೇಶ ಪಾಲಿಸಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ಕೊಟ್ಟಿದ್ದು, ಹೊಸ ಗೇಮ್ ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ.
ಹೊಸ ಗೇಮ್ ಏನು?
ದೋಸ್ತಿ ಸರ್ಕಾರವನ್ನು ಬೀಳಿಸಲು ಕನಿಷ್ಠ 11 ಶಾಸಕರು ರಾಜೀನಾಮೆ ಕೊಡಲೇಬೇಕು. ಹೀಗಾಗಿ ಮತ್ತೆ ಗೆಲ್ಲುವ ತಾಕತ್ತು ಇರುವ ಶಾಸಕರನ್ನ ಮಾತ್ರ ಪಿಕ್ ಮಾಡಲು ಪ್ಲಾನ್ ಮಾಡಿದೆ. ಈಗ ಬಿಜೆಪಿ ಬಲ 105, ಇಬ್ಬರು ಪಕ್ಷೇತರರು ಸೇರಿದರೆ 107 ಆಗುತ್ತದೆ. 11 ಶಾಸಕರಿಂದ ರಾಜೀನಾಮೆ ಕೊಡಿಸಿದರೆ 224 ಸದಸ್ಯ ಬಲದ ವಿಧಾನಸಭೆ 213 ಸಂಖ್ಯಾಬಲಕ್ಕೆ ಕುಸಿಯುತ್ತದೆ. ಆಗ ಸರ್ಕಾರ ಇರಬೇಕಾದರೆ ಕನಿಷ್ಠ 107 ಸ್ಥಾನಗಳ ಅಗತ್ಯ ಇರುತ್ತದೆ.
ಈ ವೇಳೆ ಮೈತ್ರಿ ಸರ್ಕಾರದಲ್ಲಿ 1 ಸೀಟಿನ ಕೊರತೆ ಬರುತ್ತದೆ. ಆ ಸಂದರ್ಭದಲ್ಲಿ ಬಿಜೆಪಿಗೆ 107 ಸೀಟು ಇರುತ್ತದೆ. ಇದೇ ಗೇಮ್ ಪ್ಲ್ಯಾನ್ ಮಾಡಿಕೊಂಡು ಗೆಲ್ಲುವ ಕುದುರೆಗಳ ಪಿಕ್ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿದೆ. ಜೂನ್ ಮೊದಲ ವಾರದಿಂದ ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ ಶುರುವಾಗುತ್ತದೆ ಎಂದು ಹೇಳಲಾಗುತ್ತಿದೆ.