ಬೆಂಗಳೂರು: ದೆಹಲಿ ಫಲಿತಾಂಶ ಬಳಿಕ ರಾಜ್ಯ ಬಿಜೆಪಿ ಕಿತ್ತಾಟಕ್ಕೆ ಕೊನೆಗೂ ಹೈಕಮಾಂಡ್ ಮದ್ದು ಅರೆಯುವ ಸುಳಿವು ಕೊಟ್ಟಿದೆ. ದೆಹಲಿಗೆ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ತುರ್ತು ಬುಲಾವ್ ಕೊಟ್ಟು ವರಿಷ್ಠರು ಕರೆಸಿಕೊಂಡಿದ್ದಾರೆ. ಇಂದೇ ರಾತ್ರಿ ಭಿನ್ನರೂ ಸಹ ದೆಹಲಿ ತಲುಪಲಿದ್ದಾರೆ. ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ಬಿಜೆಪಿ ಬಣ ವೀರರ ಸಂಧಾನ ಸಭೆ ಇದೆಯಾ ಎಂಬ ಕುತೂಹಲ ಮೂಡಿದೆ.
ಒಂದು ಕಡೆ ದೆಹಲಿ ಚುನಾವಣೆ ಪ್ರಕ್ರಿಯೆ ಮುಗಿದಿದೆ. ಇನ್ನೊಂದು ಕಡೆ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಕಾಲ ಸಮೀಪವಾಗುತ್ತಿದೆ. ಈ ಬೆನ್ನಲ್ಲೇ ಬಿಜೆಪಿ ಮನೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ.
Advertisement
ಬಿಜೆಪಿ ಹೈಕಮಾಂಡ್ ಈಗ ಬಿಡುವು ಮಾಡಿಕೊಂಡು ರಾಜ್ಯ ಕಮಲ ಕಿತ್ತಾಟ ಬಗೆಹರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಹೈಕಮಾಂಡ್ ದೆಹಲಿಗೆ ಬರುವಂತೆ ತುರ್ತು ಬುಲಾವ್ ನೀಡಿದೆ. ಹೈಕಮಾಂಡ್ ಬುಲಾವ್ ಮೇರೆಗೆ ದಾವಣಗೆರೆ ಪ್ರವಾಸ ಮೊಟಕುಗೊಳಿಸಿ ದಿಢೀರನೇ ಬೆಂಗಳೂರಿನಿಂದ ದೆಹಲಿಗೆ ವಿಜಯೇಂದ್ರ ಹೊರಟಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ವಿಜಯೇಂದ್ರ ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದಾರೆ.
Advertisement
ವಿಜಯೇಂದ್ರ ದೆಹಲಿಗೆ ದೌಡಾಯಿಸಿದ ಬೆನ್ನಲ್ಲೇ ಇಂದು ಯತ್ನಾಳ್ ತಂಡ ಸಹ ದೆಹಲಿಗೆ ಪ್ರಯಾಣಿಸಿದೆ. ಇಂದು ರಾತ್ರಿ ಬಿಜೆಪಿ ಭಿನ್ನಮತೀಯ ನಾಯಕರು ದೆಹಲಿ ತಲುಪಲಿದ್ದಾರೆ. ನಾಳೆ ಕೇಂದ್ರ ಸಚಿವ ಸೋಮಣ್ಣ ನಿವಾಸದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಹೈಕಮಾಂಡ್ ನಾಯಕರ ಭೇಟಿಗೂ ಭಿನ್ನರು ಪ್ರಯತ್ನ ನಡೆಸಲಿದ್ದಾರೆ.
Advertisement
ಒಂದೇ ದಿನ ವಿಜಯೇಂದ್ರ ಹಾಗೂ ಭಿನ್ನಮತೀಯರು ದೆಹಲಿ ಭೇಟಿ ಕೊಟ್ಟಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ದೆಹಲಿ ವಿದ್ಯಮಾನಗಳು ತೀವ್ರ ಕುತೂಹಲ ಮೂಡಿಸಿದ್ದು, ಹೈಕಮಾಂಡ್ ತಿರ್ಮಾನ ಏನು ಅನ್ನೋದು ಗೊತ್ತಾಗಬೇಕಿದೆ.