ಬೆಂಗಳೂರು: ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರಗೊಳ್ಳುತ್ತಿದಂತೆ ಬಿಜೆಪಿ ಹೈಕಮಾಂಡ್ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸಲು ರಾಜ್ಯ ನಾಯಕರಿಗೆ ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯ ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರಕ್ಕೆ ಸದಸ್ಯರ ಬೆಂಬಲ ಇಲ್ಲ ಎಂದು ಹೇಳಿದ್ದರೂ ಬಿಜೆಪಿ ಹೈ ಕಮಾಂಡ್ ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಆದರೆ ಬುಧವಾರ ಮತ್ತು ಗುರುವಾರ ಅಧಿವೇಶನಕ್ಕೆ ವಿಪ್ ಜಾರಿಯಾಗಿದ್ದರೂ ಮಿತ್ರ ಪಕ್ಷದ ಶಾಸಕರು ಗೈರಾದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಧಿಕೃತವಾಗಿ ಸರ್ಕಾರವನ್ನು ಬೀಳಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.
Advertisement
Advertisement
ಎಷ್ಟು ಜನ ಶಾಸಕರು ರಾಜೀನಾಮೆಗೆ ಸಿದ್ಧರಿದ್ದಾರೋ ಅಷ್ಟೂ ಜನರಿಂದ ರಾಜೀನಾಮೆ ಕೊಡಿಸಿ ಎಂದು ಬಿಎಸ್‍ವೈಗೆ ಶಾ ನಿರ್ದೇಶನ ನೀಡಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ. ಅತೃಪ್ತಗೊಂಡಿರುವ ನಾಲ್ವರು ಶಾಸಕರ ಜೊತೆ ಇನ್ನೂ 5 ಮಂದಿ ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎನ್ನಲಾಗಿದೆ.
Advertisement
ಇಂದು ಸದನದಲ್ಲಿ ಏನಾಯ್ತು?
ಗುರುವಾರದ ಕಲಾಪದ ವೇಳೆ 175 ಶಾಸಕರ ಹಾಜರಿದ್ದರು. ಜೆಡಿಎಸ್ 25, ಕಾಂಗ್ರೆಸ್ 60, ಬಿಜೆಪಿ 90 ಶಾಸಕರು ಉಪಸ್ಥಿತರಿದ್ದರು. ಬುಧವಾರ ಗೈರಾಗಿದ್ದ ಸೌಮ್ಯಾರೆಡ್ಡಿ, ಕೃಷ್ಣಪ್ಪ ಹಾಜರಾಗಿದ್ದರೆ, ಕಾಂಗ್ರೆಸ್ ನಿಂದ ಇವತ್ತು ಪ್ರತಾಪ್ ಗೌಡ ಪಾಟೀಲ್ ಗೈರಾಗಿದ್ದಾರೆ. ಬಿಜೆಪಿ ಬಾಲಚಂದ್ರ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಅಶ್ವಥ್ ನಾರಾಯಣ್ ಗೈರು ಹಾಜರಿ ಹಾಕಿದ್ದಾರೆ.
Advertisement
ಸದನ ಆರಂಭಗೊಳ್ಳುತ್ತಲೇ ಬಿಜೆಪಿ ಶಾಸಕರು ಸರ್ಕಾರಕ್ಕೆ ಶಾಸಕರ ಬೆಂಬಲ ಇಲ್ಲ. ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಹೇಳಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಮೈತ್ರಿ ಪಕ್ಷದ ನಾಯಕರು ಬಿಜೆಪಿಗೆ ಧಿಕ್ಕಾರ, ಬ್ಲೂ ಬಿಜೆಪಿಗೆ ಧಿಕ್ಕಾರ ಎಂದು ಕೂಗಿದರು. ಗಲಾಟೆ ಜಾಸ್ತಿಯಾಗುತ್ತಿದ್ದಂತೆ ಸ್ಪೀಕರ್ ಸದನವನ್ನು ಶುಕ್ರವಾರ ಮಧ್ಯಾಹ್ನ 12.30ಕ್ಕೆ ಮುಂದೂಡಿದರು.
ವಿಧಾನಸೌಧದಲ್ಲಿ ಶ್ರೀರಾಮುಲು ಮಾತನಾಡಿ, ಬಿಜೆಪಿ ಹೋರಾಟ ಸದನದಲ್ಲಿ ಇವತ್ತೂ ಮುಂದುವರಿದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರಿಗೆ ವಿಪ್ ಜಾರಿ ಮಾಡಿದರೂ ಹಲವು ಶಾಸಕರು ಗೈರಾಗಿದ್ದಾರೆ. ಸರ್ಕಾರಕ್ಕೆ ಬಹುಮತವೇ ಇಲ್ಲ. ಹೀಗಾಗಿ ಸಿಎಂ ಈ ಕೂಡಲೇ ರಾಜೀನಾಮೆ ನೀಡಬೇಕು. ಸುಮಾರು 20 ಮಂದಿ ಶಾಸಕರಿಗೆ ಸಿಎಂ ಮೇಲೆ ವಿಶ್ವಾಸವಿಲ್ಲ. ನಾವು ಯಾರು ಆಪರೇಷನ್ ಕಮಲ ಮಾಡುತ್ತಿಲ್ಲ. ಇನ್ನಷ್ಟು ಕಾಂಗ್ರೆಸ್ ಶಾಸಕರು ಹೊರಬರುವ ಸಾಧ್ಯತೆಯಿದೆ ಎಂದು ಶ್ರೀರಾಮುಲು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv