ಬಿಎಸ್‍ವೈ ಮುಂದೆ ‘ಎರಡು’ ಆಯ್ಕೆ – ವರ್ಗಾವಣೆ ವೈಖರಿಗೆ ಹೈಕಮಾಂಡ್ ಕೆಂಡಾಮಂಡಲ

Public TV
2 Min Read
BSY 1

ಬೆಂಗಳೂರು: ಬಿಎಸ್ ಯಡಿಯೂರಪ್ಪನವರ ಸರ್ಕಾರದ ಆಡಳಿತ ಬಗ್ಗೆ ಕೆಲ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ.

ಹೌದು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಹೇಗೆ ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಗುಜರಾತ್ ಮೂಲದ ವ್ಯಕ್ತಿಯೊಬ್ಬರನ್ನು ಹೈಕಮಾಂಡ್ ನೇಮಿಸಿ ಅಭಿಪ್ರಾಯ ಸಂಗ್ರಹಿಸುತ್ತಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ರಹಸ್ಯವಾಗಿ ವ್ಯಕ್ತಿ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಬೆಂಗಳೂರಿಂದ ವಾಪಸ್ ಹೋದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ವರದಿ ಸಲ್ಲಿಕೆಯಾಗಲಿದೆ. ವರದಿ ಕೈ ಸೇರಿದ ಬಳಿ ಬಿಎಸ್‍ವೈ ಎದುರು `ಎರಡೇ’ ಆಯ್ಕೆ ಇರಲಿದೆ ಎನ್ನಲಾಗಿದೆ.

AMITH SHA

ಆಯ್ಕೆ 1: ನೀತಿ-ನಿರ್ಧಾರಗಳು, ಆಡಳಿತ ಸಂಬಂಧಿತ ವಿಚಾರಗಳಲ್ಲಿ ನಿಮ್ಮ ಕುಟುಂಬ ದೂರ ಇಡಿ ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದರೆ ಸದ್ಯಕ್ಕೆ ಯಡಿಯೂರಪ್ಪ ಕುರ್ಚಿ ಭದ್ರವಾಗಿರಲಿದೆ.

ಆಯ್ಕೆ 2: ಇದೇ ಡಿಸೆಂಬರ್ ಕೊನೆಯವರೆಗೂ ಸರ್ಕಾರ ಇರಲಿದೆ. ಸರ್ಕಾರ ನಡೆಸುತ್ತಿರುವ ನಿಮ್ಮ ವೈಖರಿ ಬಗ್ಗೆಯೇ ನಮಗೆ ಆತಂಕವಿದೆ. ಮಹಾರಾಷ್ಟ್ರ ಚುನಾವಣೆ ಬಳಿಕ ಫೆಬ್ರವರಿಯಲ್ಲಿ ಚುನಾವಣೆಗೆ ಹೋಗೋಣ. ಈಗ ಚುನಾವಣೆ ನಡೆದರೆ ನಮಗೆ ಲಾಭ ಎಂದು ಹೈಕಮಾಂಡ್ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

ಡೈಲಿ ಬೇಡ: ಒಂದೊಂದು ವರ್ಗಾವಣೆಗೂ ಪ್ರತ್ಯೇಕ-ಪ್ರತ್ಯೇಕ ಆದೇಶ ಪ್ರಕಟಿಸುವ ಯಡಿಯೂರಪ್ಪ ಸರ್ಕಾರದ `ವರ್ಗಾವಣೆ ವೈಖರಿ’ಗೆ ಹೈಕಮಾಂಡ್ ಕೆಂಡಾಮಂಡಲವಾಗಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

BSY AMITH

ವರ್ಗಾವಣೆ ದಂಧೆ ಆರೋಪ ಬೆನ್ನಲ್ಲೇ ಹೈಕಮಾಂಡ್ ಎಚ್ಚೆತ್ತುಕೊಂಡಿದ್ದು ಒಬ್ಬೊಬ್ಬ ಅಧಿಕಾರಿ ವರ್ಗಾವಣೆಗೂ ಒಂದೊಂದು ಬಾರಿ ಆದೇಶ ಹೊರಡಿಸಬೇಡಿ. ವಾರಕ್ಕೊಂದು ಬಾರಿ ವರ್ಗಾವಣೆ ಆದೇಶ ಕೊಡಿ. ದಿನಕ್ಕೊಂದು ಸಲ ಒಬ್ಬೊಬ್ಬರನ್ನೇ ವರ್ಗಾವಣೆ ಮಾಡಿದರೆ ಅನುಮಾನ ಬರುತ್ತದೆ. ವರ್ಗಾವಣೆ ದಂಧೆ ನಡೆಯುತ್ತಿದೆ ಎನ್ನುವ ಆರೋಪಕ್ಕೆ ರೆಕ್ಕೆಪುಕ್ಕ ಸಿಗುತ್ತದೆ. ಹೀಗಾಗಿ ಪ್ರತಿದಿನ ವರ್ಗಾವಣೆ ಆದೇಶ ಹೊರಡಿಸಬೇಡಿ ಎಂದು ಹೈಕಮಾಂಡ್ ಫರ್ಮಾನು ಹೊರಡಿಸಿದೆ.

ಈ ಹಿಂದೆ ಸಿಎಂ ಕುಮಾರಸ್ವಾಮಿ ಅವರು ನೇರವಾಗಿಯೇ ವಿಜಯೇಂದ್ರ ಬಗ್ಗೆ ಗಂಭೀರ ಆರೋಪ ಮಾಡಿ ಬಿಎಸ್‍ವೈ ಪುತ್ರ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಇಷ್ಟೇ ಅಲ್ಲದೇ ಹಲವು ಬಾರಿ ಯಡಿಯೂರಪ್ಪನವರ ಜೊತೆಗೆ ವಿಜಯೇಂದ್ರ ಕಾಣಿಸಿಕೊಳ್ಳುತ್ತಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ವಿಜಯೇಂದ್ರ ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಂಡಿದ್ದಾರೆ.

amith shah rss

ಸಲ್ಪ ದಿನ ಸೈಲೆಂಟಾಗಿ ದೂರ ಇರುವಂತೆ ಮಗನಿಗೆ ಯಡಿಯೂರಪ್ಪ ಸಲಹೆ ನೀಡಿದ್ದು, ಪಕ್ಷ, ಸರ್ಕಾರ ಎರಡರಲ್ಲೂ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಹಾಗಾಗಿ ಕೆಲ ದಿನಗಳಿಂದ ಬಿಎಸ್‍ವೈ ಅವರಿಂದ ವಿಜಯೇಂದ್ರ ಅಂತರ ಕಾಯ್ದುಕೊಂಡಿದ್ದಾರೆ. ಪುತ್ರನ ಮಧ್ಯಪ್ರವೇಶ ನಡೆಯುತ್ತಿಲ್ಲ. ತಮಗೆ ಆಗದವರು ಹರಡಿಸಿದ ಸುದ್ದಿ ಇದು ಹೈಕಮಾಂಡ್ ನಾಯಕರಿಗೆ ಸಂದೇಶ ರವಾನಿಸಲು ತಂದೆಯ ಸಲಹೆಯ ಮೇರೆಗೆ ವಿಜಯೇಂದ್ರ ಹೊರಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *