– ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆಯುವ ಸರ್ಕಾರದ ನಡೆಗೆ ಗೃಹಸಚಿವ ಸ್ಪಷ್ಟನೆ
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಕಾನೂನು ಲೋಪವನ್ನು ನಮ್ಮ ಸರ್ಕಾರ ಸರಿ ಮಾಡಿದೆ ಎಂದು ಡಿಕೆ ಶಿವಕುಮಾರ್ (DK Shivakumar) ವಿರುದ್ಧದ ಸಿಬಿಐ (CBI) ಕೇಸ್ ವಾಪಸ್ ಪಡೆಯುವ ಸರ್ಕಾರದ ನಡೆಯನ್ನು ಗೃಹಸಚಿವ ಜಿ ಪರಮೇಶ್ವರ್ (G Parameshwara) ಸಮರ್ಥನೆ ಮಾಡಿಕೊಂಡಿದ್ದಾರೆ.
Advertisement
ಡಿಕೆಶಿ ಸಿಬಿಐ ಕೇಸ್ ವಾಪಸ್ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ರಾಜಕೀಯ ಪ್ರೇರಿತ ಅಲ್ಲ. ಯಡಿಯೂರಪ್ಪ ಅವರು ಮೌಖಿಕ ನಿರ್ದೇಶನ ಕೊಟ್ಟು ಸಿಬಿಐಗೆ ಕೇಸ್ ಕೊಡಿ ಎಂದು ಸಿಎಸ್‌ಗೆ ಮೌಖಿಕ ಆದೇಶ ಕೊಟ್ಟಿದ್ದು ರಾಜಕೀಯ ಪ್ರೇರಿತ ಅಲ್ಲವಾ? ನಾವು ಮಾಡಿರೋದು ಕಾನೂನಿನ ಚೌಕಟ್ಟಿನಲ್ಲಿ. ಅಂದಿನ ಅಡ್ವೊಕೇಟ್ ಜನರಲ್ ಅವರು ಹೇಳಿದ್ರು, ಈಗ ನಮ್ಮ ಎಜಿ ಅವರು ನಮಗೆ ಅದನ್ನು ಹೇಳಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ನಮ್ಮ ಇತಿಮಿತಿಯಲ್ಲಿ ತೀರ್ಮಾನ ಮಾಡಿದ್ದೇವೆ. ಹಾಗಾಗಿ ಇದು ರಾಜಕೀಯ ಪ್ರೇರಿತ ಅಲ್ಲ ಎಂದಿದ್ದಾರೆ.
Advertisement
Advertisement
ರಾಜಕೀಯ ಪ್ರೇರಿತ ಬಿಜೆಪಿ ಅವರು ಮಾಡಿದಾಗ ಒಂದು, ನಾವು ಮಾಡಿದಾಗ ಒಂದು ಆಗೋದಿಲ್ಲ. ಎಲ್ಲವೂ ಒಂದೇ ರೀತಿ ಆಗುತ್ತೆ. ಸರ್ಕಾರ ಕೇಸ್ ವಾಪಸ್ ಪಡೆದಿದೆ. ಮುಂದೆ ಏನ್ ಆಗುತ್ತೆ ಗೊತ್ತಿಲ್ಲ. ನಾವು ಕೋರ್ಟ್ಗೆ ಕ್ಯಾಬಿನೆಟ್ ನಿರ್ಧಾರ ಸಲ್ಲಿಕೆ ಮಾಡ್ತೀವಿ. ಕಾನೂನು ಚೌಕಟ್ಟಿನಲ್ಲಿ ಏನಾಗಿದೆ ಅಂತ ಕೋರ್ಟ್ಗೆ ತಿಳಿಸುತ್ತೇವೆ. ಮುಂದೆ ಕೋರ್ಟ್, ಸಿಬಿಐ ಏನು ಮಾಡುತ್ತೆ ಅವರಿಗೆ ಬಿಟ್ಟ ವಿಚಾರ. ನಾವು ಅದರ ಬಗ್ಗೆ ಮೊದಲೇ ಮಾತಾಡೋದು ಸರಿಯಲ್ಲ ಎಂದರು.
Advertisement
ಶಾಸಕಾಂಗ-ನ್ಯಾಯಾಂಗದ ನಡುವೆ ತಿಕ್ಕಾಟ ವಿಚಾರ ಅಲ್ಲ. ಈ ಬಗ್ಗೆ ಮೊದಲೇ ಕೇಸ್ ತನಿಖೆಗೆ ಕೊಟ್ಟವರಿಗೆ ಗೊತ್ತಾಗಬೇಕಿತ್ತು. ಒಬ್ಬ ಎಂಎಲ್‌ಎ ಮೇಲೆ ಕೇಸ್ ಮಾಡೋವಾಗ ಸ್ಪೀಕರ್ ಅನುಮತಿ ಪಡೆಯಬೇಕು ಎಂಬ ನಿಯಮ ಮಾಡಿದ್ದಾರೆ. ಅದು ವ್ಯವಸ್ಥೆಯಲ್ಲಿ ಇರೋ ನಿಯಮ. ಅದನ್ನು ಮಾಡಿದ್ರೆ ಪ್ರಕ್ರಿಯೆ ಲೋಪ ಆಗ್ತಿರಲಿಲ್ಲ. ಹೀಗಾಗಿ ನಾವು ತಪ್ಪಾಗಿದ್ದನ್ನು ಸರಿ ಮಾಡಿದ್ದೇವೆ. ಮೆರಿಟ್ ಆಫ್ ಕೇಸ್‌ಗೆ ನಾವು ಹೋಗೇ ಇಲ್ಲ. ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಅನ್ನೋದು ನಮಗೆ ಸಂಬಂಧವಿಲ್ಲ. ಕಾನೂನು ಲೋಪದ ವಿಚಾರ ಬಂದಾಗ ಸರ್ಕಾರಕ್ಕೆ ಜವಾಬ್ದಾರಿ ಇದೆ. ಹೀಗಾಗಿ ಅದರ ಬಗ್ಗೆ ಕ್ರಮವಹಿಸಲಾಗಿದೆ ಎಂದು ಸರ್ಕಾರದ ನಿಲುವನ್ನು ಸಮರ್ಥನೆ ಮಾಡಿಕೊಂಡರು.
ಬಿಜೆಪಿ-ಜೆಡಿಎಸ್ ವ್ಯಾಖ್ಯಾನ ಅವರಿಗೆ ಬಿಟ್ಟಿದ್ದು. ನಾವು ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಮಾಡಿದ್ದೇವೆ. ಹಿಂದಿನ ಸರ್ಕಾರ ಮಾಡಿದ ನಿರ್ಧಾರ ಸರಿಯಿಲ್ಲ ಅಂತ ನಾವು ಕೇಸ್ ವಾಪಸ್ ಪಡೆದಿದ್ದೇವೆ. ಅಂದಿನ ಸಿಎಂ ಅವರು ಯಾವ ಕಾರಣಕ್ಕೆ ಮೌಖಿಕ ಆದೇಶ ಕೊಟ್ಟರು? ಅದನ್ನು ಸಿಎಸ್ ಹೇಗೆ ಪಾಲನೆ ಮಾಡಿದ್ರು? ಸಿಎಸ್ ಆದವರು ಸಿಎಂ ಹೇಳಿದ್ದನ್ನು ಬರವಣಿಗೆಯಲ್ಲಿ ತೆಗೆದುಕೊಳ್ಳಬೇಕಿತ್ತು. ಇಂತಹ ಸೂಕ್ಷ್ಮ ವಿಚಾರದಲ್ಲಿ ಬರವಣಿಗೆಯ ಮೂಲಕ ತೆಗೆದುಕೊಳ್ಳದೇ ಇದ್ದರೆ ಹೇಗೆ? ಇದೆಲ್ಲವನ್ನು ಹಿಂದಿನ ಸರ್ಕಾರ ಯೋಚನೆ ಮಾಡಬೇಕಿತ್ತು. ಬಿಜೆಪಿ ಸರ್ಕಾರ ತಪ್ಪು ಮಾಡಿತ್ತು ಅಂತ ನಾವು ಅದನ್ನು ಮುಂದುವರಿಸಲು ಆಗಲ್ಲ. ಬಿಜೆಪಿ ಮಾಡಿದ ತಪ್ಪನ್ನು ನಾವು ಮುಂದುವರಿಸಿಕೊಂಡು ಹೋಗಬೇಕು ಅಂತ ಇಲ್ಲ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಡಿಕೆಶಿ ಮೇಲಿನ CBI ಕೇಸ್ ಅನುಮತಿ ವಾಪಸಿಗೆ ನಿರ್ಧಾರ – ವಿಜಯೇಂದ್ರ ಕಿಡಿ
ಕ್ಯಾಬಿನೆಟ್ ತೆಗೆದುಕೊಂಡಿರೋ ನಿರ್ಧಾರ ಕಾನೂನು ಸಂದೇಶ ಕೊಡುತ್ತದೆ. ಕಾನೂನು ಲೋಪ ಆಗಿತ್ತು. ಅದನ್ನು ಸರಿ ಮಾಡಿದ್ದೇವೆ. ಕ್ಯಾಬಿನೆಟ್‌ನ ಈ ನಿರ್ಧಾರ ಕಾನೂನಿನ ಸಂದೇಶ ಕೊಡುತ್ತದೆ. ನಾವು ಕ್ಯಾಬಿನೆಟ್ ನಿರ್ಧಾರವನ್ನು ಕೋರ್ಟ್ಗೆ ಸಲ್ಲಿಕೆ ಮಾಡ್ತೀವಿ. 2-3 ದಿನಗಳಲ್ಲಿ ಸರ್ಕಾರದ ಆದೇಶ ಮಾಡ್ತೀವಿ. ಅದಾದ ಮೇಲೆ ಕೋರ್ಟ್ ಯಾವ ಡೈರೆಕ್ಷನ್ ಕೊಡುತ್ತೆ ನೋಡೋಣ. ಇದನ್ನು ಸ್ವೀಕಾರ ಮಾಡ್ತಾರಾ? ಮಾಡೊಲ್ಲವಾ? ಸರ್ಕಾರಕ್ಕೆ ಏನ್ ನಿರ್ದೇಶನ ಕೊಡುತ್ತೋ ನೋಡೋಣ ಎಂದರು.
ಡಿಕೆಶಿ ಕೇಸ್ ವಾಪಸ್ ಪಡೆದು ಕರಾಳ ಇತಿಹಾಸ ಕಾಂಗ್ರೆಸ್ ಹುಟ್ಟು ಹಾಕುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆಗೆ ಗರಂ ಆದ ಪರಮೇಶ್ವರ್, ಹೌದು ಅವರ ತಂದೆಯವರನ್ನು ಕೇಳಿದ್ರೆ ಕರಾಳ ಹುಟ್ಟು ಹಾಕಿದವರು ಯಾರು ಎಂದು ಹೇಳ್ತಾರೆ. ಈ ಪರಿಸ್ಥಿತಿಯನ್ನು ಯಾರು ಹುಟ್ಟು ಹಾಕ್ತಿದ್ದಾರೆ ಅಂತ ನೂತನ ಅಧ್ಯಕ್ಷ ಆಗಿರೋ ವಿಜಯೇಂದ್ರ ಅವರು ತಮ್ಮ ತಂದೆ ಮೌಖಿಕ ಆದೇಶ ಕೊಟ್ಟು ಮಾಡಿದ್ದಾರೆ ಅಂತ ಅವರಿಗೆ ಈಗ ಗೊತ್ತಾಗಿರಬೇಕು. ಮೊದಲು ಗೊತ್ತಾಗಿರಲಿಲ್ಲ ಅನ್ನಿಸುತ್ತೆ. ಈಗ ಗೊತ್ತಾಗುತ್ತಿದೆ ಅನ್ನಿಸುತ್ತೆ.ವಿಜಯೇಂದ್ರ ಅವರ ಮಾತಿನಲ್ಲೆ ಉತ್ತರ ಇದೆ ಎಂದರು.
ಕಳ್ಳರ ಗುಂಪು ಒಬ್ಬ ಕಳ್ಳನನ್ನು ರಕ್ಷಣೆ ಮಾಡ್ತಿದೆ ಎಂಬ ಸಿಟಿ ರವಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾತನಾಡಬೇಕಾದ್ರೆ ಏನ್ ಬೇಕಾದ್ರೂ ಮಾತಾಡಬಹುದು. ಸಂವಿಧಾನದಲ್ಲಿ ಮಾತಾಡೋಕೆ ಹಕ್ಕಿದೆ ಅಂತ ಏನ್ ಬೇಕಾದ್ರು ಮಾತಾಡೋದಲ್ಲ. ಟೀಕೆ ಟಿಪ್ಪಣಿಗಳನ್ನು ಇತಿಮಿತಿಯಲ್ಲಿ ಮಾಡಬೇಕು ಎಂದು ಸಿಟಿ ರವಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಕಳ್ಳ ಯಾವತ್ತಿದ್ದರೂ ಕಳ್ಳನೇ; ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಅನುಮತಿ ಹಿಂಪಡೆದ ನಿರ್ಧಾರಕ್ಕೆ ಈಶ್ವರಪ್ಪ ಕಿಡಿ