Bengaluru CityDistrictsKarnatakaLatest

ಬಿಜೆಪಿ ಪಾಳಯದಲ್ಲಿ ಫುಲ್ ಸೆಲಬ್ರೇಷನ್ – ರಮಡಾ ರೆಸಾರ್ಟಿನಲ್ಲಿ ಶಾಸಕರ ಮಸ್ತ್ ಡ್ಯಾನ್ಸ್

ಬೆಂಗಳೂರು: ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನದ ಬೆನ್ನಲ್ಲೆ ಬಿಜೆಪಿ ಪಾಳಯದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ಟ್ರೇಡ್‍ಮಾರ್ಕ್ ವಿಜಯದ ಸಂಕೇತವನ್ನು ತೋರಿಸಿ ಬೀಗಿದ್ದಾರೆ. ಬಿಜೆಪಿ ಶಾಸಕರಿದ್ದ ರಮಡಾ ರೆಸಾರ್ಟಿನಲ್ಲಂತೂ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಶಾಸಕರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ್ದಾರೆ. ಕೆಲ ಶಾಸಕರು ರೇಣುಕಾಚಾರ್ಯರನ್ನು ಎತ್ತಿ ಕುಣಿದಾಡಿದ್ದಾರೆ. ಈ ಸಂಭ್ರಮದಲ್ಲಿ ಯಡಿಯೂರಪ್ಪ ಕೂಡ ಭಾಗಿಯಾಗಿದ್ದರು.

ರಾಜ್ಯದ ಹಲವೆಡೆ ಕೂಡ ಬಿಜೆಪಿ ಸಂಭ್ರಮ ಜೋರಾಗಿತ್ತು. ದಾವಣಗೆರೆಯ ಜಯದೇವ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಗದಗದ ಟಾಂಗಾಕೂಟ್‍ನಲ್ಲಿ ಕೂಡ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ, ರಾಮುಲು, ಜಗದೀಶ್ ಶೆಟ್ಟರ್ ಪರ ಘೋಷಣೆ ಕೂಗಿ ಸಂಭ್ರಮಾಚರಿಸಿದ್ದಾರೆ.

ಇತ್ತ ಶಿವಮೊಗ್ಗದಲ್ಲಿ ಬಿಎಸ್‍ವೈ ಮನೆ ಮುಂದೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿದರು. ಇವರಿಗೆ ಬಿಎಸ್‍ವೈ ಕುಟುಂಬಸ್ಥರು ಸಾಥ್ ಕೊಟ್ಟರು. ತುಮಕೂರಿನಲ್ಲಿ ಯಡಿಯೂರಪ್ಪ ಅವರ ಕಟೌಟ್ ಹಿಡಿದು ಜೈಕಾರ ಹಾಕಿದ್ದಾರೆ. ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಧಾರವಾಡ, ಕೋಲಾರ, ಹಾವೇರಿ, ಗದಗ, ಚಿಕ್ಕೋಡಿ, ಹಾಸನದಲ್ಲೂ ಕೂಡ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

ಒಟ್ಟಿನಲ್ಲಿ ಕುಮಾರ ಪರ್ವ ಮುಗಿಯುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಮುಂದಿನ ಸರ್ಕಾರ ತಮ್ಮದೇ ಎಂಬ ಆತ್ಮವಿಶ್ವಾಸದಲ್ಲಿ ಬಿಜೆಪಿ ನಾಯಕರು ಬೀಗುತ್ತಿದ್ದಾರೆ.

Leave a Reply

Your email address will not be published.

Back to top button