ಟಿಕೆಟ್ ಸಿಗದಿದ್ರೂ ಅನರ್ಹ ಶಾಸಕ ಶಂಕರ್​ಗೆ ಬಿಜೆಪಿಯಿಂದ ಭರ್ಜರಿ ಗಿಫ್ಟ್

Public TV
2 Min Read
collage bsy r shankr

ತುಮಕೂರು: ಅನರ್ಹ ಶಾಸಕ ಶಂಕರ್ ಅವರಿಗೆ ಬಿಜೆಪಿ ಭರ್ಜರಿ ಗಿಫ್ಟ್ ನೀಡಿದೆ. ಶಂಕರ್ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಸೊಗಡು ಶಿವಣ್ಣ ನಿವಾಸದ ಬಳಿ ಮಾಧ್ಯಮಗಳು ಶಂಕರ್ ಬಿಜೆಪಿಗೆ ಸೇರ್ಪಡೆಯಾಗಿದ್ದರೂ ರಾಣಿಬೆನ್ನೂರು ಕ್ಷೇತ್ರದ ಟಿಕೆಟ್ ಇನ್ನೂ ಯಾಕೆ ಹಂಚಿಕೆ ಮಾಡಿಲ್ಲ ಎಂದು ಬಿಎಸ್‍ವೈಯನ್ನು ಪ್ರಶ್ನಿಸಿದ್ದಕ್ಕೆ, ಶಂಕರ್ ಅವರನ್ನು ಪರಿಷತ್‍ಗೆ ಆಯ್ಕೆ ಮಾಡಿ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ವೇಳೆ ಶಿವಾಜಿನಗರದ ನಾಯಕ ರೋಷನ್ ಬೇಗ್ ಬಗ್ಗೆ ಬಿಜೆಪಿ ಸೇರ್ಪಡೆ ಬಗ್ಗೆ ಕೇಳಲಾದ ಪ್ರಶ್ನೆಗೆ, ಇನ್ನೂ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಮಾಡಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

bjp mlas 2

ಇಂದು ಬಿಜೆಪಿಗೆ 16 ಮಂದಿ ಅನರ್ಹ ಶಾಸಕರು ಸೇರ್ಪಡೆಯಾಗಿದ್ದಾರೆ. ಸೇರ್ಪಡೆಯಾದ ಬೆನ್ನಲ್ಲೇ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳ ಟಿಕೆಟ್ ಗಳನ್ನು ಅನರ್ಹರಿಗೆ ಬಿಜೆಪಿ ಹಂಚಿಕೆ ಮಾಡಿದೆ. ಈ ಮೂಲಕ ಅನರ್ಹರಿಗೆ ನೀಡಿದ ವಚನವನ್ನು ಸಿಎಂ ಈಡೇರಿಸಿದ್ದಾರೆ.

ರಮೇಶ್ ಜಾರಕಿಹೊಳಿ(ಗೋಕಾಕ್), ಎಂಟಿಬಿ ನಾಗರಾಜ್(ಹೊಸಕೋಟೆ), ಎಚ್. ವಿಶ್ವನಾಥ್(ಹುಣಸೂರು), ಮಹೇಶ್ ಕುಮಟಳ್ಳಿ(ಅಥಣಿ) ಶ್ರೀಮಂತ ಪಾಟೀಲ್(ಕಾಗವಾಡ) ಶಿವರಾಂ ಹೆಬ್ಬಾರ್(ಯಲ್ಲಾಪುರ) ಬಿಸಿ ಪಾಟೀಲ್(ಹಿರೇಕೆರೂರು) ಆನಂದ್ ಸಿಂಗ್ (ವಿಜಯ ನಗರ), ಡಾ.ಸುಧಾಕರ್(ಚಿಕ್ಕಬಳ್ಳಾಪುರ) ಬೈರತಿ ಬಸವರಾಜ್(ಕೆಆರ್ ಪುರ) ಎಸ್‍ಟಿ ಸೋಮಶೇಖರ್(ಯಶವಂತಪುರ), ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ನಾರಾಯಣ ಗೌಡ(ಕೆ.ಆರ್.ಪೇಟೆ) ಅವರಿಗೆ ಟಿಕೆಟ್ ನೀಡಲಾಗಿದೆ.

ಅನರ್ಹ ಶಾಸಕರು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಯಡಿಯೂರಪ್ಪ, ಇದೊಂದು ಐಹಿಹಾಸಿಕ ದಿನ. ಬಹುಶಃ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಈ 17 ಮಂದಿ ಜೆಡಿಎಸ್, ಕಾಂಗ್ರೆಸ್ ಶಾಸಕರು ಕಾರಣ. ಅವರು ತಮ್ಮ ಸಚಿವ ಸ್ಥಾನ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಮಗಾಗಿ ಎಲ್ಲಾ ರೀತಿಯ ತ್ಯಾಗವನ್ನು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ನಂತರ ಅವರೆಲ್ಲರೂ ನಮ್ಮ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಸದಸ್ಯತ್ವವನ್ನು ಪಡೆದು ಬಿಜೆಪಿ ಸೇರಿದ್ದಾರೆ ಎಂದು ಹೇಳಿದರು.

BSY KC Narayana Gowda

ರಾಜೀನಾಮೆ ಕೊಟ್ಟು ನಮ್ಮ ಜೊತೆ ಬಂದಂತಹ ವೇದಿಕೆ ಮೇಲಿರುವ ಶಾಸಕರಿಗೆ, ಬೆಂಬಲಿಗರಿಗೆ ಸಿಎಂ ಆಗಿ ನಳಿನ್ ಕುಮಾರ್ ಅವರ ಪರವಾಗಿ ಭರವಸೆ ಕೊಡುತ್ತಿದ್ದೇನೆ. ನಾವೇನು ನಿಮಗೆ ಭರವಸೆ ಮಾತನ್ನು ಕೊಟ್ಟಿದ್ದೀವೋ ಅದನ್ನು ನಾವು ಅಕ್ಷರಶಃ ಪಾಲಿಸುತ್ತೇವೆ. ನಿಮಗೆ ನಂಬಿಕೆದ್ರೋಹ ಅಥವಾ ವಿಶ್ವಾಸದ್ರೋಹ ಮಾಡುವುದಿಲ್ಲ ಎಂದು ಹೇಳಿದರು.

ಬಹುಶಃ ದೇಶದ ರಾಜಕಾರಣದಲ್ಲಿ ಈ ರೀತಿ 17 ಮಂದಿ ಶಾಸಕರು, ಮಂತ್ರಿಗಳು ರಾಜೀನಾಮೆ ಕೊಟ್ಟು ಹೊರಬಂದ ಉದಾಹರಣೆ ಇಲ್ಲ. ಇವರು ನಮಗಾಗಿ ಎಲ್ಲಾ ರೀತಿಯ ತ್ಯಾಗ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಕೈ ಜೊಡಿಸಿ ಪ್ರಾರ್ಥಿಸುತ್ತೇನೆ, ಇವರ ಗೆಲುವು ನಮ್ಮ ಜವಾಬ್ದಾರಿ. ಉಪಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡೋಣ ಎಂದು ಕರೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *