ಕಾರವಾರ: ಸೋಮವಾರವಷ್ಟೆ ಬೃಹತ್ ಸಮಾವೇಶ ನಡೆಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್‌ಗೆ ಈಗ ಹೊಸ ಆತಂಕವೊಂದು ಎದುರಾಗಿದೆ. ಮಾಜಿ ಶಾಸಕ, ಬಿಜೆಪಿ ಮುಖಂಡ ವಿ.ಎಸ್ ಪಾಟೀಲ್ ಪುತ್ರ ಬಾಪುಗೌಡ ಪಾಟೀಲ್ ಅವರು ಕಾಂಗ್ರೆಸ್ ಸೇರಿ ಕಮಲ ಪಾಳಯಕ್ಕೆ ಶಾಕ್ ನೀಡಿದ್ದಾರೆ.
ಇಂದು ಸಂಜೆ ಮುಂಡಗೋಡಿನ ಕಾಂಗ್ರೆಸ್ ಕಚೇರಿಯಲ್ಲಿ ಬಾಪುಗೌಡ ಪಾಟೀಲ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯ್ಕ್ ಸಮ್ಮುಖದಲ್ಲಿ ಬಾಪುಗೌಡ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಉಪಚುನಾವಣೆ ಹತ್ತಿರ ಇರುವಾಗಲೇ ಬಾಪುಗೌಡ ಕಾಂಗ್ರೆಸ್ ಸೇರಿರುವುದು ಬಿಜೆಪಿಗೆ ಸ್ಥಳೀಯವಾಗಿ ಹೊಡೆತ ಬಿದ್ದಿದೆ ಎಂಬ ಚರ್ಚೆಗಳು ಆರಂಭಗೊಂಡಿವೆ.
Advertisement
Advertisement
ವಿ.ಎಸ್ ಪಾಟೀಲ್ ಅವರು ಮುಂಡಗೋಡಿನಲ್ಲಿ ಬಿಜೆಪಿಯ ಪ್ರಬಲ ಮುಖಂಡರಾಗಿದ್ದಾರೆ. ಅವರ ಮಗ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಬಿಜೆಪಿಗೆ ಹಾಗೂ ಶಿವರಾಮ್ ಹೆಬ್ಬಾರ್‌ಗೆ ತೀವ್ರ ಆಘಾತವಾಗಿದ್ದು, ದೊಡ್ಡ ಹಿನ್ನಡೆಯಾದಂತಾಗಿದೆ. ಇದರಿಂದ ಉಪಸಮರದಲ್ಲಿ ಬಿಜೆಪಿಗೆ ಬೆಂಬಲ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತ ಬಾಪುಗೌಡ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್ಸಿಗೆ ಇನ್ನಷ್ಟು ಬಲ ಬಂದಂತಾಗಿದೆ.