ಉನ್ನಾವ್ ರೇಪ್ ಕೇಸ್ – ಬಿಜೆಪಿಯಿಂದ ಆರೋಪಿ ಶಾಸಕ ಕುಲದೀಪ್ ಸಿಂಗ್ ಉಚ್ಛಾಟನೆ

Public TV
2 Min Read
unnao sengar 2

ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ಆದೇಶ ಹೊರಡಿಸಿದೆ.

ಉನ್ನಾವ್ ಅತ್ಯಾಚಾರಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದಿಂದ ದೆಹಲಿಗೆ ವರ್ಗಾಯಿಸಿದ ಬೆನ್ನಲ್ಲೇ, ಬಿಜೆಪಿ ಈ ನಿರ್ಧಾರ ಕೈಗೊಂಡಿದೆ. ಸುಪ್ರೀಂ ಕೋರ್ಟ್ 1 ವಾರದ ಒಳಗಡೆ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ

ಅತ್ಯಾಚಾರ ಸಂತ್ರಸ್ತೆ ತೆರಳುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಕೆಲ ದಿನಗಳ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗಳು ನಡೆಯುತ್ತಿವೆ. ಸಂತ್ರಸ್ತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರೇ ನನ್ನನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಳು. ಇತ್ತೀಚೆಗೆ ನಡೆದ ಲಾರಿ ಅಪಘಾತದಲ್ಲಿ ಸಂತ್ರಸ್ತೆ ಕುಟುಂಬದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಅಲ್ಲದೆ, ಸಂತ್ರಸ್ತೆ ಹಾಗೂ ಅವರ ವಕೀಲರ ಸ್ಥಿತಿ ಗಂಭೀರವಾಗಿದೆ.

ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ತನ್ನ ಕುಟುಂಬ ಮತ್ತು ವಕೀಲರೊಂದಿಗೆ ರಾಯ್‍ಬರೇಲಿ ಸಮೀಪ ಕಾರಿನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನಲ್ಲಿದ್ದ ಸಂತ್ರಸ್ತೆ ಹಾಗೂ ವಕೀಲರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಲದೆ ಸಂತ್ರಸ್ತೆಯ ಇಬ್ಬರು ಕುಟುಂಬಸ್ಥರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಳೆ ಬೀಳುತ್ತಿದ್ದ ಕಾರಣ ನಿಯಂತ್ರಣ ತಪ್ಪಿ ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ ಎಂದು ಪೊಲೀಸರು ತಿಳಿಸಿದ್ದರು. ಆದರೆ, ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿಗಳೇ ಉದ್ದೇಶಪೂರ್ವಕವಾಗಿ ಈ ಅಪಘಾತ ಮಾಡಿಸಿದ್ದಾರೆ ಎಂದು ಕಾಂಗ್ರೆಸ್, ಸೇರಿದಂತೆ ವಿರೋಧ ಪಕ್ಷಗಳು ದೂರಿದ್ದವು.

ಸಂತ್ರಸ್ತೆ ಮತ್ತು ಅವರ ಕುಟುಂಬಸ್ಥರು ವಕೀಲರೊಂದಿಗೆ ರಾಯ್‍ಬರೇಲಿ ಜೈಲಿನಲ್ಲಿರುವ ಸಂಬಂಧಿಕರೊಬ್ಬರನ್ನು ನೋಡಲು ತೆರಳುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಅಪಘಾತವಾಗಿದೆ ಎಂದು ಉನ್ನಾವ್ ಪೊಲೀಸ್ ವರಿಷ್ಠಾಧಿಕಾರಿ ಮಾಧವ್ ಪ್ರಸಾದ್ ವರ್ಮಾ ತಿಳಿಸಿದ್ದರು.

ಸಂತ್ರಸ್ತೆಯು ಉನ್ನಾವ್‍ನ ನಿವಾಸಿಯಾಗಿದ್ದು, ಬ್ಯಾಂಗರ್ಮೌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕುಲ್‍ದೀಪ್ ಸೆಂಗರ್ 2017ರಲ್ಲಿ ಮಗಳನ್ನು ಅತ್ಯಾಚಾರ ಗೈದಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದರು. ಆದರೆ ಈ ಬಗ್ಗೆ ಯಾರು ಕೂಡ ಕ್ರಮ ತೆಗೆದುಕೊಂಡಿರಲಿಲ್ಲ. ಬಳಿಕ ಸಂತ್ರಸ್ತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.

kash vijayvargiya

ದುರ್ನಡತೆ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಶಾಸಕರು ಹಾಗೂ ಸಂಸದರು ಸೇರಿದಂತೆ ಜನಪ್ರತಿನಿಧಿಗಳನ್ನು ಪಕ್ಷದಿಂದ ಹೊರ ಹಾಕುವಂತೆ ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಕಟ್ಟಪ್ಪಣೆ ನೀಡಿದ್ದರು. ಶಾಸಕ ಆಕಾಶ್ ವಿಜಯ್‍ವರ್ಗಿಯಾ ಅವರು ಕ್ರಿಕೆಟ್ ಬ್ಯಾಟ್‍ನಿಂದ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಪ್ರಕರಣದ ನಂತರ ಬಿಜೆಪಿಯ ಎಲ್ಲ ಜನಪ್ರತಿನಿಧಿಗಳಿಗೆ ಮೋದಿ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಯಾವ ನಾಯಕರ ಮಗನಾಗಿದ್ದರೂ ಸರಿ ಅಂತಹವನ್ನು ಪಕ್ಷದಿಂದ ಹೊರಹಾಕಿ ಎಂದು ಆದೇಶಿಸಿದ್ದರು. ಈ ಬೆನ್ನಲ್ಲೇ ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಬಿಜೆಪಿ ಆದೇಶ ಹೊರಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *