ವಿಜಯನಗರ: ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿಯ ರಾಜ್ಯ ಕಾರ್ಯಕಾರಿಣಿಯ ನಂತರ ವಿಜಯನಗರದಲ್ಲಿ ಸಭೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕಾರಿಣಿಗೆ ಇನ್ನೂ 10 ದಿನಗಳು ಬಾಕಿ ಇರೋ ಮುನ್ನವೇ ಹೊಸಪೇಟೆ ನಗರ ಕೇಸರಿಮಯವಾಗಿದ್ದು, ಅದ್ದೂರಿ ಸೆಟ್ ನಿರ್ಮಾಣವಾಗುತ್ತಿದೆ. ಈ ಸೆಟ್‍ಗೆ ಹಂಪಿಯ ಟಚ್ ನೀಡಲಾಗುತ್ತಿದೆ.
ವಿಜಯನಗರ ನೆಲದಲ್ಲಿ ಏಪ್ರಿಲ್ 16 ಮತ್ತು 17 ರಂದು ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಭವ್ಯ ವೇದಿಕೆ ನಿರ್ಮಾಣಗೊಳ್ಳುತ್ತಿದೆ. ವಿಜಯನಗರದ ಹೊಸಪೇಟೆಯ ಭಟ್ರಹಳ್ಳಿ ಆಂಜನೇಯ ದೇಗುಲದ ಬಯಲು ಜಾಗದಲ್ಲಿ ಹವಾ ನಿಯಂತ್ರಿತ ಜರ್ಮನ್ ಟೆಂಟ್ ನಿರ್ಮಿಸಲಾಗುತ್ತಿದೆ. ಕಾರ್ಯಕಾರಿಣಿಗಾಗಿ 80 ಅಡಿ ಉದ್ದ ಮತ್ತು 40 ಅಡಿ ಅಗಲದ ವೇದಿಕೆ ನಿರ್ಮಾಣಗೊಳ್ಳಲಿದೆ. ಈ ವೇದಿಕೆಯ ಹಿಂಭಾಗದಲ್ಲಿ 30 ಅಡಿ ಎತ್ತರದ ಬ್ಯಾಕ್‍ಡ್ರಾಪ್ ಇರಲಿದೆ. ಇದರಲ್ಲಿ ಹಂಪಿಯ ವಾಸ್ತು ಶಿಲ್ಪದ ಪ್ರಪಂಚ ಗೋಚರಿಸಲಿದೆ. ಈ ಶಿಲ್ಪಗಳ ಮಧ್ಯೆ ಕಮಲದ ಚಿಹ್ನೆ ಕಂಗೊಳಿಸಲಿದೆ.
Advertisement
Advertisement
ಕಂಗೊಳಿಸಲಿರುವ ವೇದಿಕೆ
ಹಂಪಿಯ ಶ್ರೀವಿರೂಪಾಕ್ಷೇಶ್ವರ ಗೋಪುರ, ಕಲ್ಲಿನ ತೇರು, ಸಾಸಿವೆಕಾಳು ಗಣಪ, ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಆಂಜನೇಯ, ವಿಜಯ ವಿಠ್ಠಲ ದೇಗುಲದ ಸಪ್ತಸ್ವರ ಹೊರಡಿಸುವ ಕಲ್ಲಿನ ಕಂಬಗಳು, ಉಗ್ರ ನರಸಿಂಹ ಸೇರಿದಂತೆ ವಿವಿಧ ಸ್ಮಾರಕಗಳ ಮಿಶ್ರಣದೊಂದಿಗೆ ವೇದಿಕೆ ಕಂಗೊಳಿಸಲಿದೆ.
Advertisement
Advertisement
ರಾರಾಜಿಸುತ್ತಿದೆ ವಿಜಯನಗರ ಕಲಾವೈಭವ
ಈ ಭವ್ಯ ಸಭಾಂಗಣದಲ್ಲಿ ಎರಡು ದ್ವಾರಗಳನ್ನು ನಿರ್ಮಿಸಲಾಗುತ್ತದೆ. ಪ್ರವೇಶದ್ವಾರದಲ್ಲೂ ಹಂಪಿಯ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಕಲಾ ಪ್ರಪಂಚವನ್ನು ಅನಾವರಣಗೊಳಿಸಲಾಗುತ್ತದೆ. ಇನ್ನೊಂದೆಡೆಯ ದ್ವಾರದಲ್ಲೂ ಹಂಪಿಯ ಕಲಾವೈಭವ ಅನಾವರಣಗೊಳ್ಳಲಿದೆ. ವಿಶಾಲ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಹವಾ ನಿಯಂತ್ರಿತ ಜರ್ಮನ್ ಮಾದರಿಯ ಟೆಂಟ್‍ನಲ್ಲಿ 750 ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ. ಗಣಾತಿಗಣ್ಯರ ಕೊಠಡಿ, ಗ್ರೀನ್ ರೂಂ, ಭೋಜನಾಲಯ ಕೂಡ ನಿರ್ಮಿಸಲಾಗುತ್ತಿದೆ. ಇಲ್ಲೂ ವಿಜಯನಗರದ ಕಲಾವೈಭವ ರಾರಾಜಿಸಲಿದೆ.
ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಗಣ್ಯರು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಚಿಂತನ-ಮಂಥನಕ್ಕೆ ಪೂರಕವಾದ ವಾತಾವರಣವನ್ನು ಬಿಸಿಲು ನಾಡಿನ ಬಿರು ಬೇಸಿಗೆಯಲ್ಲೂ ಸೃಜಿಸಲು ತಂತ್ರಜ್ಞರು ತಯಾರಿ ನಡೆಸಿದ್ದಾರೆ. ಈ ಎಲ್ಲ ತಯಾರಿಗಳು ನಡೆಸಲು ಕೇವಲ 9 ದಿನಗಳು ಬಾಕಿ ಇದ್ದು, ಹೊಸಪೇಟೆ ಸದ್ಯ ಕೇಸರಿಮಯವಾಗಿದೆ. ವಿಜಯನಗರ ನೆಲದಲ್ಲಿ ನಡೆಯೋ ಈ ಕಾರ್ಯಕಾರಿಣಿ ಮಹತ್ವದ ಕಾರ್ಯಕಾರಿಣಿಯಾಗಿದೆ.