Bengaluru CityKarnatakaLatestLeading NewsMain Post

ಸಿದ್ದರಾಮಯ್ಯ ಎದುರು ಯಡಿಯೂರಪ್ಪ ಮಾಸ್ ಇಮೇಜ್ ಅಸ್ತ್ರ – ಬಿಜೆಪಿ ಸಂಸದೀಯ ಮಂಡಳಿಗೆ ಬಿಎಸ್‍ವೈ ಆಯ್ಕೆ ಹಿಂದಿನ ಪ್ಲಾನ್ ಏನು?

ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರನ್ನು ಪಕ್ಷ ಕಡೆಗಣಿಸಿದೆ, ಮೂಲೆಗೆ ತಳ್ಳಿದೆ, ಈಗ ಪಕ್ಷಕ್ಕೆ ಯಾರು ಮಾಸ್ ಲೀಡರ್ ಇಲ್ಲ ಎಂಬ ಆರೋಪ ಬಿಜೆಪಿ ಹೈಕಮಾಂಡ್ ವಿರುದ್ಧ ಕೇಳಿಬರುತ್ತಲೇ ಇತ್ತು. ಆದ್ರೆ, ಇದು ಸುಳ್ಳೆಂದು ಬಿಜೆಪಿ ಸಾಬೀತು ಮಾಡಿದೆ. ಬಿಎಸ್‍ವೈಗೆ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಪ್ರಮೋಷನ್ ನೀಡಿ ಸಿದ್ದರಾಮಯ್ಯ ಮಾಸ್ ಇಮೇಜ್ ಎದುರು ಬಿಎಸ್‍ವೈ ಮಾಸ್ ಇಮೇಜ್ ಅಸ್ತ್ರ ಬೀಸಿದೆ.

ಪಕ್ಷದ ಅತ್ಯುನ್ನತ ಮಂಡಳಿಯಾದ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪಗೆ ಟಾಪ್ ಐದನೇ ಸ್ಥಾನ ನೀಡಿ, ಅವರನ್ನು ಪಕ್ಷ ಕಡೆಗಣಿಸಿಯೂ ಇಲ್ಲ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ. ಮುಂದಿನ 2 ವರ್ಷ ಸಾಲು, ಸಾಲು ಚುನಾವಣೆಗಳು ಎದುರಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಭಾರೀ ಬದಲಾವಣೆಗಳು ಆಗುತ್ತಿವೆ. ಇದರ ಭಾಗವಾಗಿ ಪಕ್ಷದ ಸಂಸದೀಯ ಮಂಡಳಿಯನ್ನು ಮತ್ತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯನ್ನು ಪುನರ್‌ರಚಿಸಲಾಗಿದೆ. ಎರಡರಲ್ಲಿಯೂ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊಕ್ ನೀಡಿ ಅವರ ಸ್ಥಾನದಲ್ಲಿ ಯಡಿಯೂರಪ್ಪರನ್ನು ತರಲಾಗಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಎಂದರೇ, 77 ವರ್ಷದ ಯಡಿಯೂರಪ್ಪ ಸಲುವಾಗಿ ಇಲ್ಲಿ ಇದೇ ಮೊದಲ ಬಾರಿಗೆ 75 ವರ್ಷದ ವಯೋಮಿತಿ ನಿಯಮವನ್ನು ಪಕ್ಕಕ್ಕೆ ಇಡಲಾಗಿದೆ. ಇದನ್ನು ನೋಡಿದ್ರೆ, ಬಿಜೆಪಿ ಹೈಕಮಾಂಡ್ ಕರ್ನಾಟಕ ಚುನಾವಣೆಯನ್ನು ಮತ್ತು ಯಡಿಯೂರಪ್ಪ ನಿರ್ವಹಿಸಲಿರುವ ಪಾತ್ರವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಹುತಾತ್ಮ ಯೋಧರ ಶವ ಪೆಟ್ಟಿಗೆಗೆ ಹೆಗಲು ಕೊಟ್ಟ ಲೆಫ್ಟಿನೆಂಟ್ ಗವರ್ನರ್

ಜೊತೆಗೆ ದಿವಂಗತ ಅನಂತ್ ಕುಮಾರ್ ಬಳಿಕ ಯಡಿಯೂರಪ್ಪ ಪವರ್ ಫುಲ್ ಮಂಡಳಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಎಂದಿನಂತೆ ಕರ್ನಾಟಕ ಮೂಲದ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕೂಡ ಎರಡು ಬೋರ್ಡ್‍ಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಬೆಳವಣಿಗೆ ರಾಜ್ಯ ಬಿಜೆಪಿಯಲ್ಲಿರುವ ಬಿಎಸ್‍ವೈ ಬೆಂಬಲಿಗರಲ್ಲಿ ಹೊಸ ಹುರುಪು ತಂದಿದೆ.

ಬಿಎಸ್‍ವೈ ಆಯ್ಕೆ ಹಿಂದಿನ ಪ್ಲಾನ್:
ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿಎಸ್‍ವೈ ಅವರನ್ನು ಸೇರಿಸುವ ಮೂಲಕ ಯಡಿಯೂರಪ್ಪರನ್ನು ಹೈಕಮಾಂಡ್ ಕಡೆಗಣಿಸಿಲ್ಲ ಎಂಬ ಸಂದೇಶ ನೀಡಲು ಮುಂದಾಗಿದೆ. ಇದರೊಂದಿಗೆ ಬಿಎಸ್‍ವೈ ಮೂಲಕ ಲಿಂಗಾಯತ ವೋಟ್ ಬ್ಯಾಂಕ್ ಸಂರಕ್ಷಣೆ ನೀಡಿ ಟಿಕೆಟ್ ಹಂಚಿಕೆಯಲ್ಲೂ ಯಡಿಯೂರಪ್ಪ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಮೂಲಕ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಪ್ಲಾನ್ ಹೈಕಮಾಂಡ್ ಮಾಡಿದಂತಿದೆ. ಯಡಿಯೂರಪ್ಪ ಮುಂದಿಟ್ಟುಕೊಂಡು ಮತ್ತೆ ಅಧಿಕ್ಕಾರಕ್ಕೇರುವುದಕ್ಕೆ ಬಿಜೆಪಿ ಅಸ್ತ್ರ ಪ್ರಯೋಗಿಸಿದ್ದು, ಯಡಿಯೂರಪ್ಪ ಮುಂದಾಳತ್ವದಲ್ಲಿ ಸಾಮೂಹಿಕ ನಾಯಕತ್ವದ ಜಪಮಾಡಿ ಸಿದ್ದರಾಮಯ್ಯ ಮಾಸ್ ಇಮೇಜ್ ಎದುರು ಬಿಎಸ್‍ವೈ ಮಾಸ್ ಇಮೇಜ್ ಅಸ್ತ್ರ ಬೀಸಿದೆ. ಈ ಹಿಂದೆ ಯಡಿಯೂರಪ್ಪ ಆಪ್ತ ಬಣದ ನಾಯಕರಲ್ಲಿ ಅಸಮಾಧಾನ ಕೇಳಿಬಂದಿತ್ತು. ಈ ಅಸಮಾಧಾನ ಶಮನಕ್ಕೆ ಹೈಕಮಾಂಡ್ ಮುಂದಾದಂತಿದೆ. ಇದನ್ನೂ ಓದಿ: ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ನಿತ್ಯ ಹಾಡಿಸೋದು ಕಡ್ಡಾಯ

ಇತ್ತ ಬಿಎಸ್‍ವೈ ಆಯ್ಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಸೇರಿ ಬಿಜೆಪಿಯ ಎಲ್ಲರೂ ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿಗೆ ಕರೆ ಮಾಡಿದ ಬಿಎಸ್‍ವೈ ತಮ್ಮ ಮೇಲೆ ವಿಶ್ವಾಸವಿರಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಪಕ್ಷಕ್ಕೆ ಆನೆ ಬಲ ಬಂದಿದೆ. ಕಾರ್ಯಕರ್ತರನ್ನು ಬಿಜೆಪಿ ಕೈಬಿಡಲ್ಲ. ಇದಕ್ಕೆ ನಾನೇ ಉದಾಹರಣೆ. ಈ ಜವಾಬ್ದಾರಿಯನ್ನು ವಿನಮ್ರತೆಯಿಂದ ಸ್ವೀಕರಿಸಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೆ ಪಕ್ಷ ಅಧಿಕಾರಕ್ಕೆ ತರ್ತೇನೆ. ದಕ್ಷಿಣ ಭಾರತದ ರಾಜ್ಯಗಳಲ್ಲೂ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸುತ್ತೇನೆ. ಆ ನಿಟ್ಟಿನಲ್ಲಿ ಓಡಾಟ ಮಾಡ್ತೇನೆ. ನನಗೆ ಬೂಸ್ಟ್ ಕೊಡಲು ಈ ಸ್ಥಾನಮಾನ ಕೊಟ್ರು ಅನ್ನೋ ಪ್ರಶ್ನೆಯೇ ಏಳಲ್ಲ ಎಂದಿದ್ದಾರೆ.

ಬಿಜೆಪಿ ಹೈಕಮಾಂಡ್ ನಡೆಯನ್ನು ಸಿದ್ದರಾಮೋತ್ಸವ ಯಶಸ್ಸಿನ ಖುಷಿಯಲ್ಲಿದ್ದ ಕಾಂಗ್ರೆಸ್‍ಗೆ ನೀಡಿದ ಮಾಸ್ಟರ್ ಸ್ಟ್ರೋಕ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಎಲ್ಲದರ ನಡುವೆ ಬಿಎಸ್‍ವೈಗೆ ಸ್ಥಾನಮಾನ ನೀಡಿದ್ದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

Live Tv

Leave a Reply

Your email address will not be published.

Back to top button