Connect with us

Latest

ಪ್ರಜ್ಞಾಸಿಂಗ್ ಹೇಳಿಕೆಗೆ ಬಿಜೆಪಿಯಿಂದ ಖಂಡನೆ – ಕ್ಷಮೆಗೆ ಆಗ್ರಹ

Published

on

ನವದೆಹಲಿ: ನಾಥೂರಾಮ್ ಗೋಡ್ಸೆ ದೇಶಭಕ್ತ ಎಂಬ ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಹೇಳಿಕೆಗೆ ಬಿಜೆಪಿಯಿಂದಲೇ ಖಂಡನೆ ವ್ಯಕ್ತವಾಗಿದೆ.

ಸಾಧ್ವಿ ಪ್ರಜ್ಞಾಸಿಂಗ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರು, ಈ ಹೇಳಿಕೆಯನ್ನು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ ಹಾಗೂ ಇದು ಖಂಡನೀಯವಾಗಿದೆ. ಈ ಸಂಬಂಧ ಸ್ಪಷ್ಟನೆ ನೀಡುವಂತೆ ಪ್ರಜ್ಞಾಸಿಂಗ್ ಹೇಳುತ್ತೇವೆ. ಅಷ್ಟೇ ಅಲ್ಲದೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಹೇಳಿದರು.

ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರು ಕೂಡ ಸಾಧ್ವಿ ಪ್ರಜ್ಞಾಸಿಂಗ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ನಾಥೂರಾಮ್ ಗೋಡ್ಸೆ ಒಬ್ಬ ಹಂತಕ. ಗೋಡ್ಸೆಯನ್ನು ವೈಭವಿಕರಿಸುವುದು ದೇಶಭಕ್ತಿಯಲ್ಲ, ಅದು ದುಷ್ಕøತ್ಯ ಎಂದು ಕಿಡಿಕಾರಿದ್ದಾರೆ.

ಪ್ರಜ್ಞಾಸಿಂಗ್ ಹೇಳಿದ್ದೇನು?:
ಭೋಪಾಲ್‍ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಸಾಧ್ವಿ ಪ್ರಜ್ಞಾಸಿಂಗ್ ಅವರು, ನಾಥೂರಾಮ್ ಗೋಡ್ಸೆ ದೇಶಭಕ್ತರು. ಅವರು ದೇಶಭಕ್ತರಾಗಿಯೇ ಜನರ ಮನದಲ್ಲಿ ಇರುತ್ತಾರೆ. ಗೋಡ್ಸೆ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಅವರನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಅಂತವರಿಗೆ ಈ ಚುನಾವಣೆ ಮೂಲಕ ಉತ್ತರ ನೀಡಲಾಗುತ್ತದೆ ಎಂದು ನಟ ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದರು.

ಚುನಾವಣೆಯ ಸಮಯದಲ್ಲಿ ಸಾಧ್ವಿ ಸಿಂಗ್ ಈ ರೀತಿಯ ಹೇಳಿಕೆ ನೀಡುವುದು ಹೊಸದೆನಲ್ಲ. ಭೋಪಾಲ್‍ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾಸಿಂಗ್ ಅವರು, 26/11 ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ಸಾವನ್ನಪಿದ್ದು ನನ್ನ ಶಾಪದಿಂದಲೇ. ನೀನು ಸರ್ವನಾಶ ಆಗುತ್ತೀಯಾ ಎಂದು ಕರ್ಕರೆ ಅವರಿಗೆ ಶಾಪ ಹಾಕಿದ್ದೆ. ಆ ಶಾಪ ಅವರಿಗೆ ತಟ್ಟಿತು ಎಂದು ಹೇಳಿದ್ದರು.

ಹೇಮಂತ್ ಕರ್ಕರೆ ಅವರು ಪದೇ ಪದೇ ನನ್ನನ್ನು ವಿಚಾರಣೆಗೆ ಒಳಪಡಿಸಿ, ಕಿರುಕುಳ ನೀಡುತ್ತಿದ್ದರು. ನಿರಪರಾಧಿಯಾಗಿದ್ದರಿಂದ ಅವರ ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇರಲಿಲ್ಲ. ಹೀಗಾಗಿ ನಾನು ಅವರಿಗೆ ಶಪಿಸಿದ್ದೆ. ನನ್ನನ್ನು ಬಂಧಿಸಿದ 45 ದಿನಗಳ ನಂತರ ಕರ್ಕರೆ ಉಗ್ರರಿಂದ ಪ್ರಾಣ ಬಿಟ್ಟರು ಎಂದು ತಿಳಿಸಿದ್ದರು. ಈ ಹೇಳಿಕೆ ವಿವಾದವಾಗುತ್ತಿದ್ದಂತೆ ಕ್ಷಮೆ ಕೇಳಿದ್ದರು.

ಕಮಲ್ ಹಾಸನ್ ಹೇಳಿದ್ದೇನು?:
ಅಲ್ಪಸಂಖ್ಯಾತರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ, ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು, ಭಾರತದ ಮೊದಲ ಭಯೋತ್ಪಾದಕ ಹಿಂದೂ. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ದೇಶದಾದ್ಯಂತ ಪರ ವಿರೋಧ ಚರ್ಚೆ ಆರಂಭವಾಗಿದೆ.

ವಿವಾದಿತ ಹೇಳಿಕೆ ಸಂಬಂಧ ಕಮಲ್‍ಹಾಸನ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಆದರೆ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ನಾನು ಹೇಳಿದ್ದು ‘ಐತಿಹಾಸಿಕ ಸತ್ಯ’. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ಈ ಕಹಿಯೇ ಔಷಧವಾಗಿ ಬದಲಾಗಿ ಜನರ ರೋಗವನ್ನು ಗುಣಪಡಿಸಬಹುದು ಎಂದು ಹೇಳಿದ್ದರು.

ಬಿಜೆಪಿ ನಾಯಕ ಹಾಗೂ ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಅವರು, ಕಮಲ್ ಹಾಸನ್ ಹೇಳಿಕೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಧರ್ಮವನ್ನು ಚುನಾವಣಾ ಕಣದಲ್ಲಿ ಲಾಭಕ್ಕಾಗಿ ಬಳಸುವುದನ್ನು ತಡೆಯಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ದೆಹಲಿ ಹೈಕೋರ್ಟ್ ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಹೇಳಿದೆ. ಕಮಲ್ ಹೇಳಿಕೆ ಕೋರ್ಟ್‍ನ ವ್ಯಾಪ್ತಿಗೆ ಬರುವುದಿಲ್ಲ. ಬೇಕಾದರೆ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿ ಎಂದು ನ್ಯಾ. ಜಿ.ಎಸ್. ಸಿಸ್ತಾನಿ ಮತ್ತು ನ್ಯಾ. ಜ್ಯೋತಿ ಸಿಂಗ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Click to comment

Leave a Reply

Your email address will not be published. Required fields are marked *