– 2ನೇ ನೋಟಿಸ್‌ಗೂ ಮೊದಲ ನೋಟಿಸ್ ಉತ್ತರ ರವಾನೆ
– ಯತ್ನಾಳ್ ಉತ್ತರ ಪೆಂಡಿಂಗ್ ಇಟ್ಟು ಹೈಕಮಾಂಡ್ ಗಮನಕ್ಕೆ ತಂದ ಶಿಸ್ತು ಸಮಿತಿ
ಬೆಂಗಳೂರು: ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶೋಕಾಸ್ ನೋಟಿಸ್‌ಗೆ ಉತ್ತರ ಕೊಟ್ಟಿದ್ದಾರೆ. ಆದರೆ, ಮೊದಲ ನೋಟಿಸ್ ಉತ್ತರದಲ್ಲಿದ್ದ ಹಳೇ ಕಥೆಯನ್ನೇ 2ನೇ ನೋಟಿಸ್ ಉತ್ತರದಲ್ಲೂ ಹೇಳಿದ್ದಾರೆ. ಇದರ ಪರಿಣಾಮ ಯತ್ನಾಳ್ ಉತ್ತರವನ್ನ ಕೇಂದ್ರೀಯ ಶಿಸ್ತು ಸಮಿತಿ ಒಪ್ಪದೇ ಪೆಂಡಿಂಗ್‌ನಲ್ಲಿಟ್ಟಿದೆ ಎನ್ನಲಾಗಿದೆ. ಇದೇ ವೇಳೆ, ಅತಿ ಶೀಘ್ರದಲ್ಲಿ ಹೈಕಮಾಂಡ್ ಎಲ್ಲ ಗೊಂದಲಕ್ಕೂ ತೆರೆ ಎಳೆಯಲಿದೆ ಅಂತ ವಿಜಯೇಂದ್ರ, ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೆಬೆಲ್ ಶಾಸಕ ಯತ್ನಾಳ್, ಕೇಂದ್ರೀಯ ಶಿಸ್ತು ಸಮಿತಿ ಕೊಟ್ಟಿದ್ದ ಶೋಕಾಸ್ ನೋಟಿಸ್‌ಗೆ ಕೊಟ್ಟ ಉತ್ತರ ಈಗ ಚರ್ಚೆಗೆ ಗ್ರಾಸವಾಗಿದೆ. ಯತ್ನಾಳ್‌ಗೆ ಕಳೆದ ವರ್ಷದ ಡಿ.1 ರಂದು ಮೊದಲ ಶೋಕಾಸ್ ನೋಟಿಸ್ ಹಾಗೂ ಕಳೆದ ಫೆ.10 ರಂದು 2ನೇ ಶೋಕಾಸ್ ನೋಟಿಸ್ ಕೊಡಲಾಗಿತ್ತು. ಆದರೆ, ಯತ್ನಾಳ್ ಅವರು ಮೊದಲ ನೋಟಿಸ್‌ಗೆ ಕೊಟ್ಟಿದ್ದ ಉತ್ತರವನ್ನೇ ಪುನರಾವರ್ತಿಸಿ ಎರಡನೇ ನೋಟಿಸ್‌ಗೂ ಕೊಟ್ಟಿದ್ದಾರೆ. ಮೊದಲ ನೋಟಿಸ್‌ಗೆ ಕೊಟ್ಟಿದ್ದ ಉತ್ತರದಲ್ಲಿ ವಿಜಯೇಂದ್ರ, ಯಡಿಯೂರಪ್ಪ ಕುಟುಂಬ ರಾಜಕಾರಣ, ಏಕಪಕ್ಷೀಯ ನಡೆ, ಸ್ವಂತ ತಂಡ, ಹಿರಿಯರ ಕಡೆಗಣನೆ, ಹೋರಾಟ ವೈಫಲ್ಯ, ಹೊಂದಾಣಿಕೆ ರಾಜಕೀಯಗಳ ಬಗ್ಗೆ ಯತ್ನಾಳ್ ಆರೋಪಿಸಿದ್ದರು. ಇದೆಲ್ಲವೂ ವರಿಷ್ಠರ ಗಮನದಲ್ಲಿದ್ದರೂ ಉತ್ತರದಲ್ಲಿ ಮತ್ತೆ ಹಳೇ ಕತೆ ಹೇಳಿದ ಯತ್ನಾಳ್, ಅಸಲಿ ಸ್ಪಷ್ಟನೆ ಕೊಟ್ಟಿಲ್ಲ.
ಇದರ ಪರಿಣಾಮ ಯತ್ನಾಳ್ ಸ್ಪಷ್ಟೀಕರಣಗಳನ್ನು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಒಪ್ಪಿಲ್ಲ ಎನ್ನಲಾಗಿದೆ. ಹಳೇ ಉತ್ತರವನ್ನೇ ಮತ್ತೆ ಕೊಟ್ಟಿರುವ ಹಿನ್ನೆಲೆಯಲ್ಲಿ ಯತ್ನಾಳ್ ಸ್ಪಷ್ಟನೆ ಒಪ್ಪದೇ ಶಿಸ್ತು ಸಮಿತಿ ಅದನ್ನ ಪೆಂಡಿಂಗ್‌ನಲ್ಲಿಟ್ಟಿದೆ. ಸದ್ಯ ಶಿಸ್ತು ಸಮಿತಿ ವರಿಷ್ಠರ ಗಮನಕ್ಕೆ ಯತ್ನಾಳ್ ಉತ್ತರ ಕಳಿಸಿದೆ.
ಎರಡನೇ ನೋಟಿಸ್‌ನಲ್ಲಿ ಶಿಸ್ತು ಸಮಿತಿಯು, ನೀವು ಕೊಟ್ಟ ಭರವಸೆ ಸುಳ್ಳು ಮಾಡಿ ಬಹಿರಂಗ ಹೇಳಿಕೆ ಮುಂದುವರಿಸಿದ್ದೀರಿ. ಒಳ್ಳೆಯ ನಡೆ ತೋರುವ ಬಗ್ಗೆ ನೀವು ಕೊಟ್ಟ ಭರವಸೆ ಮುರಿದಿದ್ದೀರಿ ಯಾಕೆ ಎಂಬ ವಿಚಾರಕ್ಕೆ ಸ್ಪಷ್ಟೀಕರಣ ಕೇಳಿತ್ತು. ಆದರೆ, ಹಳೇ ಕತೆಯನ್ನೇ ಹೇಳಿರೋ ಯತ್ನಾಳ್, ಉತ್ತಮ ನಡೆ ತೋರಿಸುವ, ಬಹಿರಂಗ ಹೇಳಿಕೆಗೆ ಬ್ರೇಕ್ ಹಾಕುವ ಬಗ್ಗೆ ಶಿಸ್ತು ಸಮಿತಿಗೆ ಕೊಟ್ಟ ಭರವಸೆ ಮುರಿದ್ದಕ್ಕೆ ಉತ್ತರದಲ್ಲಿ ಚಕಾರ ಎತ್ತಿಲ್ಲ.
ಇದೇ ವೇಳೆ ಬಿಜೆಪಿ ಭಿನ್ನಮತ, ಯತ್ನಾಳ್ ನೋಟಿಸ್ ಬಗ್ಗೆ ಮಾತಾಡಿರೋ ವಿಜಯೇಂದ್ರ ಎಲ್ಲವೂ ಅತೀ ಶೀಘ್ರದಲ್ಲಿ ಬಗೆಹರಿಯಲಿದೆ ಅಂದಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ವಿಜಯೇಂದ್ರ, ಕಳೆದ ಒಂದು ವಾರದಿಂದ ನಮ್ಮ ಪಕ್ಷದ ಗಲಾಟೆ ಕಮ್ಮಿಯಾಗಿದೆ. ನಮ್ಮ ಪಕ್ಷದಲ್ಲಿ ಆಂತರಿಕ ಸಮಸ್ಯೆಗಳು ಕೇಂದ್ರದ ಗಮನಕ್ಕೆ ಬಂದಿದೆ. ಶಿಸ್ತು ಸಮಿತಿ ಯಾರಿಗೆ ನೋಟಿಸ್ ಕೊಡಬೇಕೋ ಕೊಟ್ಟಿದೆ. ಯಾರು ಉತ್ತರ ಕೊಡಬೇಕೋ ಕೊಟ್ಟಿದ್ದಾರೆ. ಏನೇ ಗೊಂದಲ ಇದ್ದರೂ ಕೇಂದ್ರದ ವರಿಷ್ಠರು ಅತೀ ಶೀಘ್ರದಲ್ಲಿ ಬಗೆ ಹರಿಸ್ತಾರೆ ಅಂದ್ರು. ಇನ್ನು ಯತ್ನಾಳ್ ತಂಡದ ಸದಸ್ಯರಿಗೆ ರೆಬೆಲ್ಸ್ ಅಂತ ಕರೆಯಬೇಡಿ ಎಂದಿರುವ ವಿಜಯೇಂದ್ರ ಅವರು ರೆಬೆಲ್ ಅಲ್ಲ, ಅಷ್ಟಕ್ಕೇ ಸೀಮಿತ ಮಾಡೋದು ಬೇಡ. ಪಕ್ಷದ ಬಲವರ್ಧನೆಗೆ ಅವರೆಲ್ಲ ನಾಳೆ ಸಭೆ ಸೇರ್ತಿದ್ದಾರೆ ಅಂತ ವ್ಯಂಗ್ಯ ಸೂಚಕವಾಗಿ ವಿಜಯೇಂದ್ರ ಹೇಳಿದ್ದರು. ಇತ್ತ ಸಂಸದ ಜಗದೀಶ್ ಶೆಟ್ಟರ್ ಸಹ, ಆದಷ್ಟು ಬೇಗ ಹೈಕಮಾಂಡ್ ಎಲ್ಲವನ್ನೂ ಸರಿ ಮಾಡುತ್ತೆ. ವರಿಷ್ಠರು ಯೋಗ್ಯವಾದ ಸಮಯದಲ್ಲಿ ಯೋಗ್ಯವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ಒಂದು ಕಡೆ ಯತ್ನಾಳ್ ಉತ್ತರ ಚರ್ಚೆ ಹುಟ್ಟು ಹಾಕಿದರೆ, ಇನ್ನೊಂದು ಕಡೆ ಹೈಕಮಾಂಡ್ ತೀರ್ಮಾನ ಕುತೂಹಲ ಮೂಡಿಸಿದೆ. ಇತ್ತ ಇದರ ಮಧ್ಯೆ ನಾಳೆ ಭಿನ್ನರು ಮತ್ತೆ ಸಭೆ ನಡೆಸ್ತಿರೋದು ನೋಟಿಸ್‌ಗೆ ಕ್ಯಾರೇ ಅಂದಿಲ್ಲ ಅನ್ನೋದು ತೋರಿಸ್ತಿದೆ.