ಬೆಂಗಳೂರು: ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರನ್ನ ಬಿಜೆಪಿ ನಿಯೋಗ ಇಂದು ಭೇಟಿ ಮಾಡಿ ಮನವಿ ಸಲ್ಲಿಸಿತು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಬೆಂಗಳೂರು ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಒಳಗೊಂಡ ನಿಯೋಗ ಸಿಎಂ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.
Advertisement
ಬೆಂಗಳೂರು ಅಭಿವೃದ್ಧಿಗೆ 6-8 ಸಾವಿರ ಕೋಟಿ ಅನುದಾನವನ್ನು ಈ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಬಿಜೆಪಿ ಶಾಸಕರಿಗೆ ಯಾವುದೇ ತಾರತಮ್ಯ ಮಾಡದೇ ಅನುದಾನ ಬಿಡುಗಡೆ ಮಾಡಬೇಕು. ಪ್ರತಿ ಕ್ಷೇತ್ರಕ್ಕೆ 120-150 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಅಂತ ನಿಯೋಗ ಸಿಎಂಗೆ ಮನವಿ ಮಾಡಿತು. ಇದೇ ವೇಳೆ, ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಸಬೇಕು ಅಂತ ಸಿಎಂಗೆ ಒತ್ತಡ ಹಾಕಲಾಯ್ತು. ಮೆಟ್ರೋ ಟಿಕೆಟ್ ದರ ಏರಿಕೆ ವಿರುದ್ದವೂ ಸಿಎಂಗೆ ಮನವಿ ಮಾಡಿದ ನಿಯೋಗ ಹೊಸದಾಗಿ ಫೇರ್ ಫಿಕ್ಸ್ ಸಮಿತಿ ರಚನೆ ಮಾಡುವಂತೆ ಸಿಎಂಗೆ ಮನವಿ ಮಾಡಿದರು.
Advertisement
ಸಿಎಂ ಭೇಟಿ ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ, ಬೆಂಗಳೂರು ಅಭಿವೃದ್ಧಿಗೆ 6-8 ಸಾವಿರ ಕೋಟಿ ಕೊಡುವಂತೆ ಮನವಿ ಮಾಡಿದ್ದೇವೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಯಾವುದೇ ತಾರತಮ್ಯ ಮಾಡದೇ ಬಿಜೆಪಿ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಿಗೆ ಕೊಟ್ಟಂತೆ ಅನುದಾನ ನೀಡಬೇಕು ಅಂತ ಮನವಿ ಮಾಡಿರೋದಾಗಿ ತಿಳಿಸಿದರು. ಇದೇ ವೇಳೆ ಗ್ರೇಟರ್ ಬೆಂಗಳೂರು ಮತ್ತು ಟನಲ್ ರೋಡ್‌ಗೆ ವಿರೋಧ ಇದ್ದು, ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡೋದಾಗಿ ತಿಳಿಸಿದರು.
Advertisement
ವಿಪಕ್ಷ ನಾಯಕ ಅಶೋಕ್ ಮಾತನಾಡಿ, ಎರಡು ವರ್ಷಗಳಲ್ಲಿ ಬೆಂಗಳೂರು ಅಭಿವೃದ್ಧಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಕ್ಷೇತ್ರಕ್ಕೆ 120-150 ಕೋಟಿ ಅನುದಾನ ಕೊಡಬೇಕು ಅಂತ ಮನವಿ ಮಾಡಿದ್ದೇವೆ ಎಂದರು.