ನವದೆಹಲಿ: ರಾಜಕಿಯದ ಪಿಚ್‍ನಲ್ಲಿ ಕ್ರಿಕೆಟಿಗ ಗಂಭೀರ್ ಅವರ ವಿಕೆಟ್ ಪಡೆಯಲು ಯತ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ ಪಕ್ಷ ತಾನೇ ಬೌಲ್ಡ್ ಔಟ್ ಆಗಿದೆ.
ಕ್ರಿಕೆಟಿಗ ಗೌತಮ್ ಗಂಭೀರ್ ಚುನಾವಣಾ ಆಖಾಡಕ್ಕೆ ಇಳಿಯುತ್ತಿದ್ದಂತೆ ದೆಹಲಿ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗಂಭೀರ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿರುವ ಗೌತಮ್ ಗಂಭೀರ್ ಸಲ್ಲಿಸಿರುವ ನಾಮಪತ್ರವನ್ನು ಅಸಿಂಧುಗೊಳಿಸಬೇಕೆಂದು ಆಪ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಗಂಭೀರ್ ನಾಮಪತ್ರ ಸಲ್ಲಿಸಿದ ದಾಖಲಾತಿಗಳ ನೋಟರಿ ಸ್ಟಾಂಪ್ ಔಟ್ ಡೇಟ್ ಆಗಿದೆ ಎಂದು ಆಪ್ ಆರೋಪಿಸಿತ್ತು.
ಆಪ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್ ಪರ ವಕೀಲ, ನೋಟರಿ ಸ್ಟಾಂಪ್ ಸರಿಯಾಗಿದೆ. ಆಪ್ ರೋಟರಿ ರಿಜಿಸ್ಟರ್ ನಂಬರ್ ನೋಡಿ ಆರೋಪ ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೊನೆಗೆ ಗಂಭೀರ್ ಉಮೇದುವಾರಿಕೆಯನ್ನು ಚುನಾವಣಾ ಅಧಿಕಾರಿಗಳು ಸ್ವೀಕಾರ ಮಾಡಿದ್ದಾರೆ.
ಪೂರ್ವ ದೆಹಲಿಯಲ್ಲಿ ಗೌತಮ್ ಗಂಭೀರ್ ಎದುರಾಳಿಯಾಗಿ ಆಪ್ ನಿಂದ ಅತಿಶ್ ಮರ್ಲೆನಾ ಕಣಕ್ಕಿಳಿದಿದ್ದಾರೆ. ಗೌತಮ್ ಗಂಭೀರ್ ಉಮೇದುವಾರಿಕೆಯಲ್ಲಿ 12 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ಮುನ್ನ ಮಾತನಾಡಿದ್ದ ಗೌತಮ್ ಗಂಭೀರ್, ನಾನು ತುಂಬಾ ಉತ್ಸುಕನಾಗಿದ್ದು, ದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ದೇಶಕ್ಕಾಗಿ ಒಳ್ಳೆಯದನ್ನು ಮಾಡುವದಕ್ಕಾಗಿ ಬಿಜೆಪಿ ಸೇರಿದ್ದೇನೆ ಎಂದು ಹೇಳಿದ್ದರು.