ನವದೆಹಲಿ: ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾಮರ್ಜಿ (Mamata Banerjee) ಅವರಿಗೆ ನಿಮ್ಮ ಬೆಲೆ ಎಷ್ಟು ಎಂದು ಪ್ರಶ್ನಿಸಿದ್ದ ಪಶ್ಚಿಮ ಬಂಗಾಳದ ತಮ್ಲುಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ (Abhijit Gangopadhyay) ಹೇಳಿಕೆಯನ್ನು ಚುನಾವಣಾ ಆಯೋಗ ಖಂಡಿಸಿದೆ. ಅಲ್ಲದೇ 24 ಗಂಟೆಗಳ ಚುನಾವಣಾ ಪ್ರಚಾರ ನಡೆಸದಂತೆ ನಿರ್ಬಂಧ ಹೇರಿದೆ.
ಕೋಲ್ಕತ್ತಾ ಹೈಕೋರ್ಟ್ ನ್ಯಾಯಧೀಶರಾಗಿದ್ದ ಅಭಿಜಿತ್ ಗಂಗೋಪಾಧ್ಯಾಯ ಅವರು ರಾಜೀನಾಮೆ ನೀಡಿ ಬಿಜೆಪಿಯಿಂದ (BJP) ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸುವ ಭರದಲ್ಲಿ ನಿಮ್ಮ ಬೆಲೆ ಎಷ್ಟು ಎಂದು ಕೇಳಿದ್ದರು. ಈ ಹೇಳಿಕೆ ವಿರುದ್ಧ ದೂರು ನೀಡಿದ್ದ ಟಿಎಂಸಿ, ಇದು ಬಿಜೆಪಿ ಅಭ್ಯರ್ಥಿಯ ಸ್ತ್ರೀ ದ್ವೇಷದ ನಡವಳಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ನ್ಯಾಯಾಂಗದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದ ಅವರು, ಮಹಿಳೆಯರ, ವಿಶೇಷವಾಗಿ ಅಧಿಕಾರದ ಸ್ಥಾನದಲ್ಲಿರುವ ಮಹಿಳೆಯ ಘನತೆಯ ಮೇಲೆ ದಾಳಿ ಮಾಡಲು ಕೀಳು ಮಟ್ಟದ ದಾರಿ ಆರಿಸಿಕೊಂಡಿರುವುದು ದುರಾದೃಷ್ಟಕರ ಎಂದು ಹೇಳಿತ್ತು. ಇದನ್ನೂ ಓದಿ: ವೈಯಕ್ತಿಕ ಕೆಲಸಗಳಿಗಾಗಿ ವಸಂತ ಬಂಗೇರ ಯಾವತ್ತೂ ನನ್ನ ಬಳಿ ಬಂದಿಲ್ಲ: ಸಿಎಂ
ದೂರಿನ ಅನ್ವಯ ಪ್ರತಿಕ್ರಿಯಿಸಿರುವ ಆಯೋಗ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿ ಅಭಿಜಿತ್ ಗಂಗೋಪಾಧ್ಯಾಯರ ಹೇಳಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿದೆ. ಅವರು ‘ಕೆಳಮಟ್ಟದ ವೈಯಕ್ತಿಕ ದಾಳಿಯನ್ನು’ ಮಾಡಿದ್ದಾರೆ ಎಂದು ಮನವರಿಕೆಯಾಗಿದೆ. ಈ ಮೂಲಕ ಅವರು ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಸರ್ಕಾರ 1 ವರ್ಷ ಪೂರೈಸಿದ್ದು ಮುಖ್ಯವಲ್ಲ, ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿರುವುದು ಮುಖ್ಯ: ಡಿಕೆಶಿ
ಅಭಿಜಿತ್ ಗಂಗೋಪಾಧ್ಯಾಯರ ದುರ್ನಡತೆಯನ್ನು ಆಯೋಗವು ಬಲವಾಗಿ ಖಂಡಿಸುತ್ತದೆ. ಮೇ 21ರ ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಮುಂದಿನ 24 ಗಂಟೆಗಳ ಕಾಲ ಪ್ರಚಾರ ಮಾಡದಂತೆ ನಿರ್ಬಂಧಿಸಿದೆ. ಮುಂದೆ ಸಾರ್ವಜನಿಕವಾಗಿ ಮಾತನಾಡುವಾಗ ಜಾಗರೂಕರಾಗಿರಲು ಆಯೋಗವು ಅಭಿಜಿತ್ ಗಂಗೋಪಾಧ್ಯಾಯರಿಗೆ ಕಟ್ಟುನಿಟ್ಟಾಗಿ ಎಚ್ಚರಿಸುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಡಿಕೆಶಿ ಇನ್ನುಮುಂದೆ ಪೆನ್‌ಡ್ರೈವ್ ಬಗ್ಗೆ ಮಾತನಾಡೋದೆ ಬೇಡ: ಜಿ.ಸಿ ಚಂದ್ರಶೇಖರ್