ಹಾಸನ: ಶಾಸಕ ಪ್ರೀತಂ ಗೌಡ ಅವರು ಹಾಸನ ಬಿಜೆಪಿ ಅಭ್ಯರ್ಥಿ ಎ ಮಂಜು ಅವರನ್ನು ಸೋಲಿಸಲು ಪ್ಲಾನ್ ಮಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಇದಕ್ಕೆ ಎ ಮಂಜು ಅವರು ಪ್ರತಿಕ್ರಿಯಿಸಿ ಮನವಿ ಮಾಡಿಕೊಂಡಿದ್ದಾರೆ.
ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋದಲ್ಲಿ ಇರುವುದು ಸತ್ಯಾಂಶವಲ್ಲ. ಶಾಸಕರಾದ ಬೆಳ್ಳಿಪ್ರಕಾಶ್, ಪ್ರೀತಂಗೌಡ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಇದು ಜೆಡಿಎಸ್ ನವರ ಪಿತೂರಿಯಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಶಾಸಕನಾಗಿದ್ದಾಗ ಶಿವಪ್ಪನವರ ಜೊತೆ ಇದ್ದೆ. ಈಗ ಬಿಜೆಪಿಯಲ್ಲಿ ಇದ್ದೇನೆ. ಇಲ್ಲಿಯೇ ಇರುತ್ತೇನೆ. ಕಾರ್ಯಕರ್ತರು ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡರು.
ಪ್ರೀತಂ ಸ್ಪಷ್ಟನೆ:
ಆಗ ಎ. ಮಂಜು ಬಿಜೆಪಿಗೆ ಬಂದಿರಲಿಲ್ಲ ಇನ್ನೂ ಚರ್ಚೆಯ ಹಂತದಲ್ಲಿತ್ತು. ಆಗ ಮಾತನಾಡಿದ ಆಡಿಯೋವನ್ನು ಎಡಿಟ್ ಮಾಡಲಾಗಿದೆ. ಪ್ರೀತಂಗೌಡನನ್ನು ವಿಕ್ ಮಾಡಿದ್ರೆ, ಬಿಜೆಪಿ ವಿಕ್ ಆಗುತ್ತೆ ಅನ್ನೋ ಮನೋಭಾವನೆ ಕೆಲವರದ್ದು ಇರಬೇಕು ಎಂದು ಆಡಿಯೋದಲ್ಲಿನ ವಿವರಣೆಗೆ ಗೊಂದಲದ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್
ಇದು ಎಡಿಟೆಟ್ ಆಡಿಯೋ ಆಗಿದೆ. ನನ್ನ ಕಟ್ಟಿಹಾಕಲು ಇದು ವಿರೋಧಿಗಳ ಪಿತೂರಿ. ನನ್ನ ಮತ್ತು ಎ.ಮಂಜು ನಡುವೆ ವೈಮನಸ್ಸು ಹುಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಎ. ಮಂಜುಗಿಂತ ಪ್ರೀತಂ ಗೌಡ ಜಾಸ್ತಿ ಓಡಾಡುತ್ತಿದ್ದಾರೆ. ಇವರ ಮಧ್ಯ ಏನಾದ್ರು ಕಂದಕ ಮೂಡಿಸಲು ಈ ಪ್ರಯತ್ನ ಮಾಡಿದ್ದಾರೆ. ನನ್ನ ವಿರೋಧಿಗಳು ಈ ವಿಡಿಯೋವನ್ನು ಸೃಷ್ಟಿಸಿದ್ದಾರೆ ಎಂದು ತಿಳಿಸಿದ್ದಾರೆ.
ದಿನಕ್ಕೆ ಸಾವಿರ ಮಂದಿ ಜೊತೆ ಮಾತನಾಡುತ್ತೇನೆ. ಫೇಕ್ ಆಡಿಯೋದಿಂದಾಗಿ ಎರಡು ಲಕ್ಷ ಮತಗಳು ಹೆಚ್ಚಾಗಿ ಬಿಜೆಪಿಗೆ ಬೀಳುತ್ತವೆ. ಯಾರು ವಿಚಲಿತರಾಗಿದ್ದಾರೆ ಅವರು ಆಡಿಯೋ ಹಿಂದೆ ಹೋಗ್ತಾರೆ. ದೇಶ ಕಟ್ಟುವವರು ನಾವು ಮತದಾರರ ಬಳಿ ಹೋಗುತ್ತೇವೆ ಎಂದು ಹೇಳಿದ್ದಾರೆ.
ನಾನು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ನಾನೇ ಅಭ್ಯರ್ಥಿ ಎಂಬಂತೆ ಕೆಲಸ ಮಾಡುತ್ತಿದ್ದೇನೆ. ನನ್ನ ವೈಯಕ್ತಿಕ ಭದ್ರತೆಯನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇನೆ. ಫೇಕ್ ಆಡಿಯೋ, ಎಡಿಟ್ ಆಡಿಯೋ ಮಾಡಿ ಬಿಟ್ರೆ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಅಂದಿದ್ದಾರೆ.