ಮೈಸೂರು: ಕೊನೆಗೂ ಮಂತ್ರಿ ಮಂಡಲದ ಗಜ ಪ್ರಸವ ಆಗಿದೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಹಳೇ ಮೈಸೂರು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಅಸಮಾಧಾನ ಹೊರ ಹಾಕಿರುವ ಅವರು, ಮಂತ್ರಿ ಮಂಡಲದ ಗಜ ಪ್ರಸವ ಏನೋ ಆಗಿದೆ, ಕೊನೆಗೂ 17 ಜನ ಮಂತ್ರಿಗಳಾಗಿದ್ದಾರೆ. ಆದರೆ, ಈಗ ಆಗಿರುವ ಮಂತ್ರಿ ಮಂಡಲ ನೋಡಿದರೆ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಾಂತ್ಯವಾರು ಸ್ಥಾನಮಾನ ನೀಡುವಲ್ಲಿ ಯಡಿಯೂರಪ್ಪ ಸರ್ಕಾರ ವಿಫಲವಾಗಿದೆ. ಹಳೇ ಮೈಸೂರು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಮೈಸೂರು, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯ ಯಾರೊಬ್ಬರಿಗೂ ಅವಕಾಶ ನೀಡಿಲ್ಲ, ಇದನ್ನು ನಾನು ಖಂಡಿಸುತ್ತೇನೆ. ಕುಮಾರಸ್ವಾಮಿಯವರನ್ನು ಹಳೆ ಮೈಸೂರು ಭಾಗದ ಸಿಎಂ ಎಂದು ಯಡಿಯೂರಪ್ಪ ಹಾಗೂ ಬಿಜೆಪಿಯವರು ಬ್ರ್ಯಾಂಡ್ ಮಾಡಿದ್ದರು. ಈಗ ಯಡಿಯೂರಪ್ಪ ಅವರನ್ನು ಏನಂತ ಕರೆಯಬೇಕು? ಕನಿಷ್ಠ ಕೊಡಗು ಜಿಲ್ಲೆಗೆ ಆದ್ಯತೆ ನೀಡಬೇಕಿತ್ತು. ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ನಲುಗಿ ಹೋಗಿದೆ. ಕೊಡಗು ಜಿಲ್ಲೆಯಲ್ಲೇ ಬಿಜೆಪಿಯ ಇಬ್ಬರು ಶಾಸಕರು, ಸಂಸದರು ಇದ್ದಾರೆ. ಆದರೂ ಅವಕಾಶ ನೀಡಿಲ್ಲ. ಇದು ಜನರ ನಂಬಿಕೆಗೆ ಮಾಡಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ನಡೆಯಲಿದೆ. ಇದನ್ನು ನಿರ್ವಹಿಸಲಿಕ್ಕಾದರೂ ಇಲ್ಲಿನ ಸ್ಥಳೀಯ ನಾಯಕರನ್ನು ಮಂತ್ರಿ ಮಾಡಬೇಕಿತ್ತು. ಅಲ್ಲದೆ, ಮೈಸೂರು ಚಾಮರಾಜನಗರದಲ್ಲೂ ಪ್ರವಾಹದಿಂದ ಹಾನಿಯಾಗಿದೆ. ಇದನ್ನೆಲ್ಲ ಗಮನಿಸಿದರೆ ಯಡಿಯೂರಪ್ಪ ಅವರು ರಬ್ಬರ್ ಸ್ಟ್ಯಾಂಪ್ ಸಿಎಂ ರೀತಿ ಗೋಚರಿಸುತ್ತಿದ್ದಾರೆ ಎಂದು ಹರಿಹಾಯ್ದರು.