ಬೆಂಗಳೂರು: ಚುನಾವಣಾ ಪೂರ್ವ ಅನ್ನದಾತ, ನಾವು ರೈತನ ಮಕ್ಕಳು ಎಂದು ಹೇಳೋದು. ಚುನಾವಣೆಯಲ್ಲಿ ಗೆದ್ದ ಮೇಲೆ, ರೈತರಿಗೆ ಮಣ್ಣು ಹಾಕೋದೆ ಇವರ ಕೆಲಸ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದ ಮೇಲೆ, ರೈತರಿಗೆ ಮಣ್ಣಾಹಾಕೋದು ಇದೇ ಇವರ ಕೆಲಸ. ದೇವೇಗೌಡರ ಕುಟುಂಬಸ್ಥರ ಮಾತು ರೈತರ ಮನಸ್ಸಿಗೆ ಘಾಸಿಯಾಗಿದೆ. ಹೀಗಾಗಿ ತಕ್ಷಣವೇ ರೈತರ ಬಳಿ ಅವರ ಕುಟುಂಬ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
Advertisement
Advertisement
ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ, ಬೆಂಬಲ ಬೆಲೆ ನೀಡುವ ಖರೀದಿ ಕೇಂದ್ರಗಳು ರಾಜ್ಯದಲ್ಲಿ ಸ್ಥಾಪನೆ ಆಗಿಲ್ಲ. ಕೇಂದ್ರ ನಿಗದಿ ಪಡಿಸಿರುವ ಬೆಲೆಯನ್ನು ರಾಜ್ಯ ಸರ್ಕಾರ ನೀಡಲಿ. ಕೇಂದ್ರ ಸರ್ಕಾರ ಭತ್ತಕ್ಕೆ ಸಾವಿರ ರೂಪಾಯಿ ನಿಗದಿ ಮಾಡಿದ್ದರೂ, ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿಲ್ಲ. ಈ ರಾಜ್ಯ ಸರ್ಕಾರ ನೀರಿಲ್ಲದೇ ಕ್ಷೌರ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
Advertisement
ಕಬ್ಬು ಬೆಳೆಗಾರರ ಬಾಕಿ ಹಣ ತೀರಿಸಲು ಕೇಂದ್ರ ಸರ್ಕಾರ, ಕಾರ್ಖಾನೆ ಮಾಲೀಕರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ಜಾರಿ ಮಾಡಿದೆ. ಇಷ್ಟಾದರೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಅಲ್ಲದೇ ರೈತರು ಪ್ರತಿಭಟನೆ ಮಾಡಿದರೆ, ಬಿಜೆಪಿ ಕುಮ್ಮಕ್ಕು ನೀಡಿದೆ ಎಂದು ವಿಷಯಾಂತರ ಮಾಡುತ್ತಿದ್ದಾರೆ. ರೈತರಿಗೆ ನ್ಯಾಯ ನೀಡುವುದಾದರೆ ನೀಡಿ. ಅದನ್ನು ಬಿಟ್ಟು ವಿನಾಕಾರಣ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ವಿನಾಶಕಾಲೇ ವಿಪರೀತ ಬುದ್ದಿ ಎನ್ನುವಂತೆ ಸಿಎಂ ಹೇಳಿಕೆ ಆಗಿದೆ. ಚುನಾವಣೆಗೂ ಮುಂಚೆ ಸಿಎಂ ಮಾತುಗಳು ಏನಾಗಿದ್ವು? ಜವಾಬ್ದಾರಿಯುತ ಸ್ಥಾನದಲ್ಲಿ ಮಾತನಾಡುವ ಮಾತನ್ನು ಸಿಎಂ ಹೇಳಿಲ್ಲ. ಮತ ಹಾಕಿರುವವರಿಗೆ ಮಾತ್ರ ಸಿಎಂ ಆಗುವುದಾದರೇ, ಕುಮಾರಸ್ವಾಮಿ ಕೇವಲ 3 ಜಿಲ್ಲೆಗೆ ಮಾತ್ರ ಮುಖ್ಯಮಂತ್ರಿಯಾಗುತ್ತಾರೆಯೇ ವಿನಃ ಕರ್ನಾಟಕಕ್ಕೆ ಸಿಎಂ ಆಗಲು ಸಾಧ್ಯವಿಲ್ಲವೆಂದು ಹೇಳಿದರು.
ಇವರಿಗೆ ರೈತರು ನ್ಯಾಯ ಕೇಳಿದ್ದೇ ತಪ್ಪಾ? ರೈತರು ದೇವೇಗೌಡರ ಆಸ್ತಿಯಲ್ಲಿ ಪಾಲು ಕೇಳಲು ಹೋರಾಟ ಮಾಡುತ್ತಿಲ್ಲ. ಸರ್ಕಾರಕ್ಕೆ ನ್ಯಾಯ ಕೇಳಲು ಹೋರಾಟ ಮಾಡುತ್ತಿದ್ದಾರೆ. ದೇವೇಗೌಡರ ಕುಟುಂಬದ ಆಸ್ತಿಯಲ್ಲಿ ರೈತರು ಪಾಲು ಕೇಳುತ್ತಿದ್ದಾರೆ ಎಂಬ ಭಾವನೆಯಿಂದ ದೇವೇಗೌಡರ ಕುಟುಂಬಸ್ಥರು ಹೇಳಿಕೆ ನೀಡುತ್ತಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಜೆಡಿಎಸ್ ಸ್ನೇಹಿತರಾದ ಕಾಂಗ್ರೆಸ್ ನಾಯಕರೇ ಅಧಿಕಾರ ನಡೆಸಿದ್ದಾರೆ. ಕಾಂಗ್ರೆಸ್ ಪಾಪದ ಹಣೆಯಲ್ಲಿ ಜೆಡಿಎಸ್ಸಿನ ಪಾಲು ಇದೆ. ಕಾಂಗ್ರೆಸ್ ಪಾಪದ ಹೆಗಲ ಮೇಲೆ ಜೆಡಿಎಸ್ ಕುಳಿತಿದೆ ಎಂದು ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews