ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ ವಿಚಾರವಾಗಿ ಬಿಜೆಪಿ ಪಕ್ಷದ ಕಾರ್ಪೊರೇಟರ್ ವಿರುದ್ಧ ಕ್ರಮಕೈಗೊಂಡು ಅಮಾನತು ಮಾಡಿದೆ.
ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ ಅವರು ಭೈರಸಂದ್ರ ವಾರ್ಡ್ ಬಿಬಿಎಂಪಿ ಕಾರ್ಪೊರೇಟರ್ ನಾಗರಾಜ್ ಅವರನ್ನು ಅಮಾನತು ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ನಾಗರಾಜ್ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಅಡಿ ಅಮಾನತು ಮಾಡಲಾಗಿದ್ದು, ಆದರೆ ಪತ್ರದಲ್ಲಿ ಅಮಾನತು ಅವಧಿ ಬಗ್ಗೆ ಸ್ಪಷ್ಟ ಉಲ್ಲೇಖ ಮಾಡಿಲ್ಲ.
ಸದ್ಯ ಬಿಜೆಪಿ ಅಮಾನತು ಮಾಡಿದ್ದರೂ, ಅವರ ಮೇಲೆ ಎಷ್ಟು ಸಮಯ ಈ ಅಮಾನತು ಅನ್ವಯವಾಗುತ್ತದೆ ಎಂಬುದು ಉಲ್ಲೇಖ ಮಾಡಿರದ ಕಾರಣ ನಾಗರಾಜ್ ಬೇರೆ ಪಕ್ಷಕ್ಕೂ ಸೇರುಲು ಸಾಧ್ಯವಾಗುವುದಿಲ್ಲ. ಇದರಿಂದ ಮೇಯರ್ ಚುನಾವಣೆಯಲ್ಲಿ ವಿಪ್ ಜಾರಿ ಮಾಡಿದರೆ ನಾಗರಾಜ್ ಅವರು ಪಕ್ಷದ ವಿರುದ್ಧ ಮತ ಹಾಕುವಂತಿಲ್ಲ ಎಂಬಂತಾಗಿದೆ.
ಇದೇ ವೇಳೆ ಬಸವೇಶ್ವರ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯರಾದ ಎಸ್.ಹೆಚ್.ಪದ್ಮರಾಜ್ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದು, ಚುನಾವಣೆ ವೇಳೆ ಪಕ್ಷ ವಿರೋಧಿ ನಿಲುವು ತಾಳಿದ್ದರು ಅದ್ದರಿಂದ ನೋಟಿಸ್ ನೀಡಿದ್ದು, 7 ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ಪದ್ಮರಾಜ್. ಬಹಿರಂಗವಾಗಿ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದರು.