– ಬಿಜೆಪಿಯಿಂದ ಗಂಭೀರ ಆರೋಪ
– ರಾಜ್ಯಪಾಲರ ಆದೇಶದ ನಡುವೆಯೂ ಓವರ್ ಟೈಂ ಕೆಲಸ
ಬೆಂಗಳೂರು: ಮೈತ್ರಿ ಸರ್ಕಾರ ಬಹುಮತದ ಸಾಬೀತು ಪಡಿಸುವ ಒತ್ತಡದಲ್ಲಿ ಸಿಲುಕಿದ್ದ ಸಮಯದಲ್ಲಿ ಮೈತ್ರಿ ಸರ್ಕಾರದ ಸಚಿವರು ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಇಂದು ವಿಧಾನಸೌಧದಲ್ಲಿ ಸಚಿವ ಜಮೀರ್ ಅವರು ತಮ್ಮ ಖಾತೆಗೆ ಸಂಬಂಧಿಸಿದ ಫೈಲ್ ಕ್ಲೀಯರ್ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದರು. ಎರಡು ಮೂರು ಬಾರಿ ಯುಟಿ ಖಾದರ್ ಅವರ ಬಳಿ ಬಂದು ಚರ್ಚೆ ನಡೆಸಿದ್ದು ಕಂಡು ಬಂತು.
Advertisement
Advertisement
ಇದರ ಬೆನ್ನಲ್ಲೇ ಬಿಎಸ್‍ವೈ ನಿವಾಸ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸವರಾಜ್ ಬೊಮ್ಮಾಯಿ ಅವರು, ಗುರುವಾರ ಬಹುಮತ ಸಾಬೀತು ಪಡಿಸಬೇಕಾದ ದಿನಾಂಕ ನಿಗದಿ ಮಾಡಿರುವುದಿಂದ ಮೈತ್ರಿ ಸರ್ಕಾರದ ಎಲ್ಲ ಸಚಿವರು ಕೂಡ ಓವರ್ ಟೈಂ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಬಡ್ತಿ, ನೇಮಕಾತಿ, ವರ್ಗಾವಣೆ ಸೇರಿದಂತೆ ಅನುದಾನ ಬಿಡುಗಡೆ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಕೂಡಲೇ ಸರ್ಕಾರ ಕಾರ್ಯದರ್ಶಿಗಳು ಇದಕ್ಕೆ ಬ್ರೇಕ್ ಹಾಕಬೇಕು. ಯಾವುದೇ ರೀತಿಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ರಾಜ್ಯಪಾಲರ ಆದೇಶದ ನಡುವೆಯೂ ಕೂಡ ಓವರ್ ಟೈಂ ಕೆಲಸ ಮಾಡಿ ಕ್ಲಿಯರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ಈಗಾಗಲೇ ಈ ಆದೇಶ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ನೀಡಿದ್ದಾರೆ. ಸಚಿವರ ಈ ನಡೆ ನೋಡಿದರೆ ಸರ್ಕಾರ ಉರುಳುವುದು ಖಚಿತವಾದಂತೆ ಅವರಿಗೆ ಕಾಣುತ್ತಿದೆ. ಆದ್ದರಿಂದಲೇ ಹಳೆಯ ದಿನಾಂಕವನ್ನು ಹಾಕಿ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಆ ಮೂಲಕ ಭ್ರಷ್ಟಾಚಾರಕ್ಕೆ ಮೈತ್ರಿ ಸರ್ಕಾರ ಸಚಿವರು ಮುಂದಾಗಿದ್ದಾರೆ ಎಂದು ದೂರಿದರು.
ಸರ್ಕಾರ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ರಾಜ್ಯಪಾಲರು ಆದೇಶ ನೀಡಿದ್ದರೂ ವಿಶೇಷ ಸರ್ಕಾರಿ ವಕೀಲರಾಗಿ ಬಿ.ಎನ್ ಜಗದೀಶ್ ಅವರನ್ನು ನೇಮಿಸಿ ಸರ್ಕಾರದ ಆದೇಶ ಹೊರಡಿಸಿದೆ.