ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಪರ್ಸನಲ್ ದಂಗೆಗೆ ಬಿಜೆಪಿ ರೆಡಿ ಆಗಿದೆಯಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಸಿಎಂ ದಂಗೆ ಹೇಳಿಕೆಯನ್ನು ಖಂಡಿಸಿ ಶುಕ್ರವಾರದ ಪ್ರತಿಭಟನೆ ವೇಳೆ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕುಮಾರಸ್ವಾಮಿ ಖರೀದಿಸಿದ್ದಾರೆ ಎನ್ನಲಾದ ರೂಂ ವಿಚಾರವನ್ನು ಪ್ರಸ್ತಾಪ ಮಾಡಿದೆ. ಈ ಮೂಲಕ ಕುಮಾರಸ್ವಾಮಿ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ಪರಿಷತ್ ಸದಸ್ಯ ರವಿಕುಮಾರ್ ಸಿಎಂಗೆ ಪ್ರಶ್ನೆಗಳ ಸುರಿಮಳೆಯನ್ನು ಕೇಳಿದ್ದಾರೆ. ಅಲ್ಲದೆ ದಂಗೆ ಎಂದರೆ ಪ್ರತಿಭಟನೆ ಎಂದು ಅರ್ಥವನ್ನು ಹೇಳುವ ಮೂಲಕ ಕುಮಾರಸ್ವಾಮಿ ಹೊಸ ನಿಘಂಟು ಬರೆಯಲು ಹೋಗಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ಪ್ರಶ್ನೆಗಳ ಪಂಚ್: ಯಡಿಯೂರಪ್ಪನವರು ಏನು? ಅವರ ವಿರುದ್ಧ ಏಕೆ ದಂಗೆ ಏಳಬೇಕು? ಆಡಳಿತ ನಡೆಸಲು ನಿಮಗೆ ಕಚೇರಿ, ವಾಸಕ್ಕೆ ಸರ್ಕಾರ ಮನೆ ಕೊಟ್ಟಿದೆ. ಆದರೆ ನೀವು ವರ್ಷಕ್ಕೆ 3 ಕೋಟಿ ರೂ. ಕೊಟ್ಟು ತಾಜ್ ವೆಸ್ಟ್ ಎಂಡ್ ನಲ್ಲಿ ರೂಂ ಲೀಸ್ ಗೆ ತೆಗೆದುಕೊಂಡಿದ್ದು ಯಾಕೆ? ಬಿಸಿನೆಸ್ ಮಾಡಲು ನೀವು ಮತ್ತು ನಿಮ್ಮ ಪತ್ನಿ ಅಲ್ಲಿ ರೂಮ್ ಪಡೆದಿದ್ದೀರಾ? ಕರ್ನಾಟಕದಲ್ಲಿ ಹಾಸನ ಮಾತ್ರ ಪುಣ್ಯಭೂಮಿಯೇ? ಕರ್ನಾಟಕದ ಜನ ನಿಮ್ಮ ಬಾಡಿಗೆ ಆಳುಗಳಾ? ನಿಮ್ಮ ಮಾತು ಯಾಕೆ ಕೇಳಬೇಕು? ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದಲ್ಲಿ ಸಾವಿರಾರು ಕೋಟಿ ರೂ. ಆಸ್ತಿ ಇದೆ. ನೀವು ತುಂಬಾ ಪಾರದರ್ಶಕವಾಗಿದ್ದರೆ ನಿಮ್ಮ ಆಸ್ತಿ ಬಗ್ಗೆ ತನಿಖೆಗೆ ಆದೇಶ ಮಾಡ್ತೀರಾ ಎಂದು ರವಿಕುಮಾರ್ ಪ್ರಶ್ನೆ ಕೇಳಿದ್ದಾರೆ.
Advertisement
Advertisement
ಬಿಜೆಪಿ ತಂತ್ರ ಏನು?
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ, ನಿಮ್ಮ ಸಿಎಂ ಸಮಾಜವಾದಿಯಲ್ಲ ಅವರು ಮಜಾವಾದಿ. ದುಬಾರಿ ಬೆಲೆಯ ವಾಚು, ಗ್ಲಾಸ್ ಗಳನ್ನು ಧರಿಸುತ್ತಾರೆ ಎಂದು ಹೇಳಿದ್ದರು. ವಾಚ್ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿದ್ದರಾಮಯ್ಯ ವಾಚ್ ಅನ್ನು ಸರ್ಕಾರದ ವಶಕ್ಕೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದರು. ವಿವಾದ ಅಂತ್ಯವಾಗಿದ್ದರೂ ಈ ವಾಚ್ ಪ್ರಕರಣ ಸಿದ್ದರಾಮಯ್ಯ ಅವರ ಇಮೇಜ್‍ಗೆ ಸ್ವಲ್ಪ ಹೊಡೆತ ನೀಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಲೇ ಟೀಕೆ ಮಾಡುತ್ತಿದ್ದರು.
ಇದೇ ತಂತ್ರವನ್ನು ಈಗ ಬಿಜೆಪಿ ಸಿಎಂ ಎಚ್‍ಡಿಕೆ ವಿರುದ್ಧ ಬಳಸಲು ಮುಂದಾಗಿದೆ. ಬಿಜೆಪಿಯ ತಂತ್ರಕ್ಕೆ ಬಿಜೆಪಿ ಹೈಕಮಾಂಡ್, ಆರ್‌ಎಸ್‌ಎಸ್ ಸಹ ಬೆಂಬಲ ನೀಡಿದ್ದು ದಂಗೆ ಪ್ರಕರಣವನ್ನು ಜೀವಂತವಾಗಿಡಲು ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ಕುಮಾರಸ್ವಾಮಿ ವೈಯಕ್ತಿಕ ವಿಚಾರವನ್ನು ಪ್ರಸ್ತಾಪ ಮಾಡಿ ಹೋರಾಟ ಮಾಡಿ ಎಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ ದೇವೇಗೌಡರ ಕುಟುಂಬದ ಆಸ್ತಿ ವಿವರವನ್ನು ಪ್ರಶ್ನಿಸಿದ್ದರು. ಒಟ್ಟಿನಲ್ಲಿ ತಾಜ್‍ವೆಸ್ಟೆಂಡ್ ವಾಸ್ತವ್ಯದ ಬಗ್ಗೆ ಬಿಜೆಪಿಯ ದಂಗೆ ರಾಜಕೀಯ ಟ್ವಿಸ್ಟ್ ಪಡೆದುಕೊಳ್ಳುತ್ತಾ? ನಿಜವಾಗಲೂ ಹೆಚ್‍ಡಿಕೆ ತಾಜ್‍ವೆಸ್ಟೆಂಡ್‍ನಲ್ಲಿ ರೂಂ ಒಂದನ್ನ ಲೀಸ್‍ಗೆ ಪಡೆದಿದ್ದಾರಾ? ವರ್ಷಕ್ಕೆ ಮೂರು ಕೋಟಿ ಕೊಟ್ಟು ಲೀಸ್‍ಗೆ ಪಡೆದಿರೋದು ನಿಜವೇ ಎನ್ನುವ ಪ್ರಶ್ನೆಗೆ ಮುಂದೆ ಉತ್ತರ ಸಿಗುವ ಸಾಧ್ಯತೆಯಿದೆ. ಇದನ್ನೂ ಓದಿ: 2 ಎಕರೆ 3 ಗುಂಟೆ ಇದ್ದ ಎಚ್‍ಡಿಡಿ ಕುಟುಂಬದ ಆಸ್ತಿ ಸಾವಿರಾರು ಎಕ್ರೆ ಆಗಿದ್ದು ಹೇಗೆ: ಬಿಜೆಪಿ ಪ್ರಶ್ನೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://twitter.com/ShobhaBJP/status/1043042614247743489