ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿದ್ದು, ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡಗೆ ಭಾರೀ ಮುಖಭಂಗವಾಗಿದೆ. ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಅಚ್ಚರಿಯ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಐದು ದಶಕದ ರಾಜಕೀಯ ಧುರೀಣ ಕೆ.ಬಿ ಕೋಳಿವಾಡ ಪರಾಜಿತಗೊಂಡಿದ್ದು, ಮುಖಭಂಗವಾಗಿದೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಇತ್ತು. ಆದರೆ, ಮತದಾರ ಪ್ರಭುಗಳು ಅಂತಿಮವಾಗಿ ಬಿಜೆಪಿಯ ಅರುಣ್ ಅವರ ಭವಿಷ್ಯ ಬರೆದಿದ್ದಾರೆ. ಕೋಳಿವಾಡ ಇನ್ನೇನು ಗೆದ್ದೇ ಬಿಡ್ತಾರೆ ಅನ್ನೋ ಲೆಕ್ಕಾಚಾರದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ ಅಖಾಡಕ್ಕೆ ದುಮುಕಿ ಇಡೀ ಚಿತ್ರಣವನ್ನೇ ಬದಲಾಯಿಸಿದ್ದರು.
Advertisement
Advertisement
ರಾಣೇಬೆನ್ನೂರು ಅಂದರೆ ಕೋಳಿವಾಡ, ಕೋಳಿವಾಡ ಅದರೆ ರಾಣೇಬೆನ್ನೂರು ಅಂತ ಇದ್ದ ವಾತಾವರಣವನ್ನ ಬೊಮ್ಮಾಯಿ ಅವರು ಅಚ್ಚುಕಟ್ಟಾಗಿ ಬಿಜೆಪಿ ತೆಕ್ಕೆಗೆ ತಂದುಕೊಂಡರು. ಅರುಣ್ ಪಂಚಮಸಾಲಿ ಸಮಾಜಕ್ಕೆ ಸೇರಿದವರು. ಮತ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಅಧಿಕವಾಗಿದ್ದು, ಯಡಿಯೂರಪ್ಪ ಅವುಗಳನ್ನ ಯಶಸ್ವಿಯಾಗಿ ಬಳಸಿಕೊಂಡರು. ಇನ್ನು ಕುರುಬ ಸಮುದಾಯದ ಮತಗಳೇ ನಿರ್ಣಾಯಕ ಅನ್ನೋ ಲೆಕ್ಕಾಚಾರ ರಾಜಕೀಯ ವಲಯದಲ್ಲಿದ್ದರೂ ಬೊಮ್ಮಾಯಿ ಆಂಡ್ ಟೀಂ ಕುರುಬ ಮತಬೇಟೆಗೆ ಸಖತ್ ಪ್ಲಾನ್ ಮಾಡಿದ್ದರು. ಹೇಗಿದ್ದರು ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ, ಒಂದು ವೇಳೆ ಬಂದರೂ ಸಿದ್ದರಾಮಯ್ಯ ಸಿಎಂ ಆಗೋದಿಲ್ಲ, ಕುರುಬ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಇರೋದಿಲ್ಲ. ಅದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಕುರುಬ ಸಮುದಾಯದ ನಾಲ್ವರು ಸಚಿವರಾಗ್ತಾರೆ ಅನ್ನೋ ಬ್ರಹ್ಮಾಸ್ತ್ರ ಬಿಜೆಪಿಗೆ ವರವಾಗಿದೆ.
Advertisement
Advertisement
ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕೋಳಿವಾಡ ಸೋತ ತಕ್ಷಣ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಕಾರ್ಯದರ್ಶಿ ಸಲೀಂ ಅಹಮದ್‍ಗೆ ಟಿಕೆಟ್ ತಪ್ಪಿಸಿದ್ದು ಮುಸ್ಲಿಂ ಸಮುದಾಯಕ್ಕೆ ಬೇಸರ ಉಂಟುಮಾಡಿತ್ತು. ಅದೇ ಕಾರಣಕ್ಕೆ ಕುರುಬ ಸಮುದಾಯದ ಹೆಚ್ಚು ಮತಗಳಿರುವ ಮೆಡ್ಲೇರಿ ಮತ್ತು ತುಮ್ಮಿನಕಟ್ಟೆ ಕಾಂಗ್ರೆಸ್‍ಗೆ ಕೈಎತ್ತಿ ಕಮಲ ಹಿಡಿದಿದೆ.
ಕೋಳಿವಾಡರ 4 ದಶಕದ ರಾಜಕೀಯ ನೋಡಿದ್ದ ಕ್ಷೇತ್ರದ ಜನ ಯುವ ನಾಯಕ ಅರುಣ್‍ಗೆ ಒಂದು ಅವಕಾಶ ಕೊಟ್ಟು ನೋಡೋಣ ಅಂತ ಕಮಲದ ಕೈ ಹಿಡಿದಿದ್ದಾರೆ. ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್, ಗೋವಿಂದ ಕಾರಜೋಳ ಆದಿಯಾಗಿ ಹಾಲಿ, ಮಾಜಿ ಸಚಿವರು, ಶಾಸಕರು, ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಟೀಂ ವರ್ಕ್ ಮಾಡಿದ್ದರ ಪರಿಣಾಮ ಬಿಜೆಪಿ ನಿರೀಕ್ಷೆಗೂ ಮೀರಿದ ಮತ ಗಳಿಕೆ ಮಾಡಿದೆ.
ರಾಣೇಬೆನ್ನೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಅಚ್ಚರಿಯ ಅಭ್ಯರ್ಥಿಯಾಗಿ ಅಚ್ಚರಿಯ ಫಲಿತಾಂಶವನ್ನು ಕಂಡಿದ್ದಾರೆ. ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ಬಸವರಾಜ ಬೊಮ್ಮಾಯಿ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಸಿಎಂ ಯಡಿಯೂರಪ್ಪನವರ ಸರ್ಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.