ಬೆಂಗಳೂರು: ಭಾರೀ ಕುತುಹಲ ಕೆರಳಿಸಿದ್ದ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಉಪ ಚುನಾವಣೆಯ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಬಿಜೆಪಿ ಚುನಾವಣೆ ಸಮಿತಿಯು ಇಂದು ಘೋಷಣೆ ಮಾಡಿದೆ.
ಮಾಜಿ ಶಾಸಕ, ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರ ಪುತ್ರ ಅವಿನಾಶ್ ಜಾದವ್ ಅವರಿಗೆ ಕೊನೆಗೂ ಚಿಂಚೋಳಿ ಟಿಕೆಟ್ ಸಿಕ್ಕಿದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿ ಎಸ್.ಐ. ಚಿಕ್ಕನಗೌಡರ್ ಅವರಿಗೆ ಕುಂದಗೋಳದ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಜಾಧವ್ ಪುತ್ರನಿಗೆ ಬಿಜೆಪಿ ಟಿಕೆಟ್- ಇದ್ಯಾವ ಡಿಎನ್‍ಎ ಎಂದು ಕಾಲೆಳೆದ ಪ್ರಿಯಾಂಕ್ ಖರ್ಗೆ!
ಪುತ್ರ ಅವಿನಾಶ್‍ಗೆ ಟಿಕೆಟ್ ನೀಡಬೇಕು ಎಂದು ಉಮೇಶ್ ಜಾಧವ್ ಪಟ್ಟು ಹಿಡಿದಿದ್ದರು. ಇತ್ತ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ತಮಗೆ ಟಿಕೆಟ್ ಕೈತಪ್ಪುತ್ತೆ ಎಂದು ಅರಿತ ಸುನೀಲ್ ವಲ್ಯಾಪುರೆ ಅವರು, ರಾಜಕೀಯದಲ್ಲಿ ಕುಟುಂಬ ರಾಜಕಾರಣಕ್ಕೆ ನನ್ನ ವಿರೋಧವಿದೆ. ಆದರೆ ರಾಜಕಾರಣದಲ್ಲಿ ಕೆಲವೊಮ್ಮೆ ಅನಿವಾರ್ಯವಾಗುತ್ತದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ: ರಾಜಕೀಯದಲ್ಲಿ ಕುಟುಂಬ ರಾಜಕಾರಣ ಕೆಲವೊಮ್ಮೆ ಅನಿವಾರ್ಯ: ಚಿಂಚೋಳಿ ಬಿಜೆಪಿ ಟಿಕೆಟ್ ಆಕಾಂಕ್ಷಿ
ಕುಂದಗೋಳ ಉಪ ಚುನಾವಣಾ ಕಣಕ್ಕೆ ಇಳಿಯುತ್ತಿರುವ ಎಸ್.ಐ. ಚಿಕ್ಕನಗೌಡರ್ ಅವರು 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ 2013 ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು, ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಶಿವಳ್ಳಿ ಅವರ ವಿರುದ್ಧ ಪರಾಭವಗೊಂಡಿದ್ದರು. ಎಸ್.ಐ. ಚಿಕ್ಕನಗೌಡರ್ ಅವರು 2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಈ ಬಾರಿಯೂ ಅವರಿಗೆ ಟಿಕೆಟ್ ನೀಡಿದ್ದು, ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಪ್ಲಾನ್ ರೂಪಿಸಿದೆ.