ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತ್ಯಧಿಕ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ರಾಜ್ಯ ಕಮಲ ನಾಯಕರು ರಾಜಕೀಯ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಸೋಮವಾರ ನಡೆದ ಆರ್ಎಸ್ಎಸ್ ಮುಖಂಡರ ರಹಸ್ಯ ಸಭೆಯಲ್ಲಿ ನಾಲ್ಕು ಕೋಟೆಗಳನ್ನು ಭೇದಿಸುವ ಹೊಸ ತಂತ್ರವನ್ನು ರೂಪಿಸಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಚಾಮರಾಜಪೇಟೆಯ ಕೇಶವಕೃಪಾದಲ್ಲಿ ಆರ್ಎಸ್ಎಸ್ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಶಾಸಕರಾದ ಸಿ.ಟಿ.ರವಿ ಮತ್ತು ವಿ.ಸೋಮಣ್ಣ ಭಾಗಿಯಾಗಿದ್ದರು. ಈ ಸಭೆಯಲ್ಲಿ ನಾಲ್ಕು ಕೋಟೆಗಳನ್ನು 20 ತಂಡಗಳಲ್ಲಿ ಭೇದಿಸುವ ಮೂಲಕ ಮೈತ್ರಿ ನಾಯಕರಿಗೆ ಶಾಕ್ ನೀಡಲು ಎಲ್ಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ.
Advertisement
Advertisement
ಯಾರು ಟಾರ್ಗೆಟ್?
ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಚಿವ ಹೆಚ್.ಡಿ.ರೇವಣ್ಣ ಮತ್ತು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ನಾಲ್ವರು ನಾಯಕರ ತವರು ಕ್ಷೇತ್ರಗಳ ಮೇಲೆ ಸಂಘ ಪರಿವಾರ ಕಣ್ಣಿಟ್ಟಿದೆ. ಇವರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮೈತ್ರಿ ನಾಯಕರನ್ನು ಕಟ್ಟಿ ಹಾಕಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಮೈಸೂರು, ತುಮಕೂರು, ಹಾಸನ ಹಾಗೂ ಬೆಂಗಳೂರು ದಕ್ಷಿಣದಲ್ಲಿ ಈಗಾಗಲೇ ಸಂಘ ತನ್ನ ಸ್ವಯಂ ಸೇವಕರನ್ನು ನೇಮಿಸಿದೆ ಎನ್ನಲಾಗಿದೆ.
Advertisement
1000 ಕಾರ್ಯಕರ್ತರ ಟೀಂ:
ಈ ನಾಲ್ಕು ಕೋಟೆಗಳ ಮೇಲೆ ಬಿಜೆಪಿ ಪತಾಕೆ ಹಾರಿಸಲು ಆರ್ಎಸ್ಎಸ್ ಒಂದು ಸಾವಿರ ಕಾರ್ಯಕರ್ತರನ್ನು ನೇಮಿಸಿದೆ. ಪ್ರತಿ ಕ್ಷೇತ್ರಕ್ಕೆ 250ರಂತೆ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಿದೆ. ಒಂದು ಕ್ಷೇತ್ರಕ್ಕೆ ಕೆಲಸ ನಿರ್ವಹಿಸುವ 250 ಜನರ ತಂಡವನ್ನು ಮತ್ತೆ 5 ಗುಂಪುಗಳಾಗಿ ವಿಭಾಗಿಸಿ, ಕೆಲಸವನ್ನು ಹಂಚಿಕೆ ಮಾಡಲಾಗುತ್ತಿದೆ. ಈ ನಾಲ್ಕು ತಂಡಗಳಿಗೆ ಪ್ರತ್ಯೇಕವಾಗಿ ನಾಲ್ಕು ನಾಯಕರನ್ನು ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement
ಮುಂದಿನ 8 ದಿನಗಳ ಕಾಲ ತಂಡದ ನಾಯಕರ ಆದೇಶದ ಮೇರೆಗೆ ಕಾರ್ಯಕರ್ತರು ತಮಗೆ ನಿಗದಿಪಡಿಸಿದ ಬೂತ್ ಮಟ್ಟದಲ್ಲಿ ಬಿಜೆಪಿ ಪರವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿಯೂ ಬೂತ್ಗೊಬ್ಬ ಆರ್ಎಸ್ಎಸ್ ಕಾರ್ಯಕರ್ತರನ್ನು ನೇಮಿಸಿ, ಬೂತ್ ಮಟ್ಟದಲ್ಲಿ ಆಗುವ ಕಾರ್ಯತಂತ್ರಗಳ ಗುಪ್ತ ಮಾಹಿತಿಯನ್ನು ತಂಡ ರಾಜ್ಯ ಘಟಕಕ್ಕೆ ರವಾನಿಸುತ್ತದೆ. ಈ ಗುಪ್ತ ಮಾಹಿತಿಯನ್ನು ಆಧರಿಸಿ ಬಿಜೆಪಿ ತನ್ನ ಕಾರ್ಯತಂತ್ರಗಳನ್ನು ಬದಲಾಯಿಸಿಕೊಳ್ಳಲಿ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.