– ರಾಜ್ಯಪಾಲರಿಗೆ ದೂರು ಕೊಟ್ಟ ‘ದೋಸ್ತಿ’ಗಳು
ಬೆಂಗಳೂರು: ಗ್ಯಾರಂಟಿ ಜಾರಿ ಸಮಿತಿ ರದ್ದಿಗೆ ಆಗ್ರಹಿಸಿ ವಿಪಕ್ಷಗಳು ವಿಧಾನಸಭೆಯಲ್ಲಿ ಧರಣಿ ನಡೆಸಿ, ಬಳಿಕ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ.
ಬುಧವಾರ ಬೆಳಗ್ಗೆಯೇ ಕಲಾಪ ಆರಂಭಕ್ಕೂ ಮುನ್ನ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಬಿಜೆಪಿ, ಜೆಡಿಎಸ್ ಶಾಸಕರು ಪ್ರತಿಭಟನೆ ನಡೆಸಿದರು. ನಂತರ ಕಲಾಪದಲ್ಲೂ ಬಾವಿಗಿಳಿದು ಒಟ್ಟಾಗಿ ಧರಣಿ ಮುಂದುವರೆಸಿದರು.
ಗ್ಯಾರಂಟಿ ಜಾರಿ ಸಮಿತಿಗಳು ಅಸಾಂವಿಧಾನಿಕ, ರದ್ದು ಮಾಡಬೇಕೆಂದು ಘೋಷಣೆ ಕೂಗುತ್ತಾ ಆಗ್ರಹಿಸಿದರು. ಧರಣಿ ಹಿನ್ನೆಲೆಯಲ್ಲಿ ಕಲಾಪ ಸುಗಮವಾಗಿ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಸ್ಪೀಕರ್ ಖಾದರ್ ಅವರು ಕಲಾಪವನ್ನು ಮಧ್ಯಾಹ್ನ 1:45 ಕ್ಕೆ ಮುಂದೂಡಬೇಕಾಯಿತು. ನಂತರ ಬಿಜೆಪಿ, ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರು ವಿಧಾನಸೌಧದಿಂದ ರಾಜಭವನದ ವರೆಗೆ ನಡಿಗೆ ಮೂಲಕ ಹೊರಟರು. ರಾಜ್ಯಪಾಲರ ಭೇಟಿ ಮಾಡಿ ಸರ್ಕಾರದ ವಿರುದ್ಧ ದೂರು ಕೊಟ್ಟರು.
ಗ್ಯಾರಂಟಿ ಜಾರಿ ಸಮಿತಿಗಳ ಅಧ್ಯಕ್ಷರು, ಸದಸ್ಯರಾಗಿ ಕಾಂಗ್ರೆಸ್ ಕಾರ್ಯಕರ್ತರ ನೇಮಿಸಲಾಗಿದೆ. ಇವರಿಗೆ ಸರ್ಕಾರ ಜನರ ತೆರಿಗೆಯಿಂದ ಒಟ್ಟು ವಾರ್ಷಿಕ 30 ಕೋಟಿ ರೂ. ವೇತನ, ಸವಲತ್ತು ಕೊಡುತ್ತಿದೆ. ಗ್ಯಾರಂಟಿ ಸಮಿತಿಗಳು ಅಸಾಂವಿಧಾನಿಕವಾಗಿದ್ದು, ಶಾಸಕರ ಹಕ್ಕುಗಳು ಮೊಟಕುಗೊಂಡಿವೆ. ಹೀಗಾಗಿ, ಸರ್ಕಾರಕ್ಕೆ ರಾಜ್ಯಪಾಲರು ಈ ಸಮಿತಿಗಳ ರದ್ದಿಗೆ ಸೂಕ್ತ ನಿರ್ದೇಶನ ಕೊಡಬೇಕೆಂದು ವಿಪಕ್ಷಗಳ ನಿಯೋಗ ಮನವಿ ಮಾಡಿದೆ.