ಬೆಂಗಳೂರು: ಮೈಸೂರು ಚಲೋ ಪಾದಯಾತ್ರೆಯು ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಶಕ್ತಿಯನ್ನು ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದರು.
ಕೆಂಗೇರಿಯಲ್ಲಿ ಇಂದು ಬಿಜೆಪಿ-ಜೆಡಿಎಸ್ ಸಮನ್ವಯದಲ್ಲಿ ‘ಮೈಸೂರು ಚಲೋ’ ಪಾದಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಬಾಸಾಹೇಬ ಡಾ.ಅಂಬೇಡ್ಕರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಗಾರಿ ಬಾರಿಸುವ ಮೂಲಕ ಪಾದಯಾತ್ರೆಯನ್ನು ಉದ್ಘಾಟನೆ ಮಾಡಲಾಯಿತು. ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿ.. ಧಿಕ್ಕಾರ, ಧಿಕ್ಕಾರ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಘೋಷಣೆಗಳನ್ನು ಕೂಗಲಾಯಿತು.
Advertisement
ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ವಚನಭ್ರಷ್ಟವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅಹಿಂದ ವರ್ಗದವರಿಗೆ ಸಾಮಾಜಿಕ ನ್ಯಾಯ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯನವರ ಸರ್ಕಾರವು ಪರಿಶಿಷ್ಟ ಸಮುದಾಯದ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ಟೀಕಿಸಿದರು. ಮೈಸೂರಿನ ಮುಡಾದ ಅವ್ಯವಹಾರದಡಿ ಬಡವರಿಗೆ ನಿವೇಶನಗಳನ್ನು ವಂಚಿಸಿದ್ದಾರೆ. 5 ಸಾವಿರ ಕೋಟಿಯ ಹಗರಣ ಅಲ್ಲಿ ನಡೆದಿದೆ. ಭ್ರಷ್ಟ ಅಧಿಕಾರಿಗಳಿಗೆ ಸ್ವತಃ ಮುಖ್ಯಮಂತ್ರಿಗಳೇ ಬೆಂಬಲ, ರಕ್ಷಣೆ ಕೊಡುತ್ತಿದ್ದಾರೆ. ಭ್ರಷ್ಟಾಚಾರ ತಮ್ಮ ಬುಡಕ್ಕೆ ಬರುವ ಆತಂಕದಿಂದ ಮುಖ್ಯಮಂತ್ರಿಗಳೇ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
Advertisement
ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ ನೀಡಲು ಎಟಿಎಂ ಸರ್ಕಾರ ಬರುತ್ತಿದೆ ಎಂದು ಚುನಾವಣೆ ವೇಳೆ ಹೇಳಿದ್ದೆವು. ಮುಡಾ ಹಗರಣ ನಡೆದುದಾಗಿ ಸಿದ್ದರಾಮಯ್ಯನವರೇ ನೇಮಿಸಿದ ಮುಡಾ ಅಧ್ಯಕ್ಷ ಮರಿಗೌಡರೇ ಹೇಳಿದ್ದಾರೆ. ಪರಿಶಿಷ್ಟ ಸಮುದಾಯಕ್ಕೆ ನಿರಂತರ ಅನ್ಯಾಯ ಮಾಡಿದ್ದಾರೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ ಪಕ್ಷ. ಅಂಥ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕಲಿದ್ದೇವೆ ಎಂದು ವಿಜಯೇಂದ್ರ ಪ್ರಕಟಿಸಿದರು. ಕಾಂಗ್ರೆಸ್ಸಿಗರು ಬಿಜೆಪಿಯ ಭ್ರಷ್ಟಾಚಾರದ ಕಟ್ಟು ಕಥೆ ಹೇಳುತ್ತಿದೆ. ನಮಗೆ ಧಮ್ಕಿ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲಿದ್ದೇವೆ. ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ನಮ್ಮ ಹೋರಾಟ ವ್ಯಕ್ತಿಯ ವಿರುದ್ಧ ಅಲ್ಲ. ಭ್ರಷ್ಟ ವ್ಯವಸ್ಥೆ ವಿರುದ್ಧ. ಬಡವರ ವಿರೋಧಿ ನೀತಿ ವಿರುದ್ಧ ಹೋರಾಟ ಇದು. ಇದೊಂದು ರಣಕಹಳೆ ಎಂದು ಸ್ಪಷ್ಟಪಡಿಸಿದರು.
Advertisement
ಬಿಜೆಪಿ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಭ್ರಷ್ಟಾಚಾರದಲ್ಲಿ ಸಿಲುಕಿದ ಸಿದ್ದರಾಮಯ್ಯನವರು ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿರ್ಗಮಿಸಲಿ ಎಂದು ಒತ್ತಾಯಿಸಿದರು. ಈ ಪಾದಯಾತ್ರೆ ಮಧ್ಯದಲ್ಲೇ ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಂಟುನೆಪ ಬೇಡ. ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ರಚನೆವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ವಿಜಯೇಂದ್ರ ತಿಳಿಸಿದರು.
Advertisement
ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಇನ್ನು 10 ವರ್ಷ ಬಿಡಿ, 10 ತಿಂಗಳು ಕೂಡ ಅವರು ಆಡಳಿತ ನಡೆಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಸರ್ಕಾರವು ಆಡಳಿತದಲ್ಲಿ ಹಿಂದೆಂದೂ ಕಾಣದ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಸರ್ಕಾರ, ಸಿದ್ದರಾಮಯ್ಯನವರನ್ನು ಕಿತ್ತೊಗೆಯಲು ಈ ಪಾದಯಾತ್ರೆ ಮಾಡುತ್ತಿದ್ದೇವೆ. ವಾಲ್ಮೀಕಿ ನಿಗಮ, ಮುಡಾ ಹಗರಣ ಸಿದ್ದರಾಮಯ್ಯನವರ ಗಮನಕ್ಕೆ ಬಾರದೆ ನಡೆದಿದೆಯೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಕೆಂಪಣ್ಣ ಆಯೋಗದ ಮುಚ್ಚಿಟ್ಟ ಪುಸ್ತಕವನ್ನು ತೆರೆದಿಡಲು ಒತ್ತಾಯಿಸಿದರು.
ಪಾದಯಾತ್ರೆ ತಡೆಯಲು ಕಾಂಗ್ರೆಸ್ಸಿನವರು ಬಿಡದಿಯಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ನಮ್ಮ ಆಸ್ತಿ ಕುರಿತ ಕಾಂಗ್ರೆಸ್ಸಿನ ಅಧ್ಯಕ್ಷರ ಪ್ರಶ್ನೆಗಳಿಗೆ ಬಿಡದಿಯಲ್ಲಿ ಉತ್ತರ ಕೊಡುತ್ತೇನೆ. ಅವರ ಅಕ್ರಮಗಳನ್ನೂ ತಿಳಿಸುತ್ತೇನೆ ಎಂದು ತಿಳಿಸಿದರು. ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ ಎಂದು ಶಿವಕುಮಾರ್ ಅವರೇ ಹೇಳಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ಶಿವಕುಮಾರರ ಆಸ್ತಿ ಹಿಂದೆ ಎಷ್ಟಿತ್ತು? ಒಂದು ಬ್ಲ್ಯಾಕ್ ಆಂಡ್ ವೈಟ್ ಟಿವಿ, ಡಿವಿಡಿ ಇದ್ದುದನ್ನು ಅವರ ಗುರುಗಳೇ ಹೇಳಿದ್ದಾರೆ. ಅದರ ಮೂಲಕ ಏನನ್ನು ಪ್ರದರ್ಶನ ಮಾಡಿದ್ದರು ಎಂದು ಪ್ರಶ್ನಿಸಿದರು. ಅದರಿಂದ ಸಾವಿರಾರು ಕೋಟಿ ಪಡೆದರೇ ಎಂದು ಕೇಳಿದರು. ಸಂವಿಧಾನ ಕೊಟ್ಟ ಹಕ್ಕುಗಳನ್ನು ಮೋದಿಯವರು ಜನತೆಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು. ಡಾ.ಪರಮೇಶ್ವರ್ ಅವರು ಯಾದಗಿರಿಯಲ್ಲಿ ಪೊಲೀಸ್ ಅಧಿಕಾರಿ ಸಾವಿನ ಬಗ್ಗೆ, ಅಧಿಕಾರಿಯ ಪತ್ನಿಯ ಆರೋಪಕ್ಕೆ ಉತ್ತರಿಸಬೇಕಿದೆ ಎಂದು ಆಗ್ರಹಿಸಿದರು.
ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರವಾಲ್ ಮಾತನಾಡಿ, ರಾಹುಲ್ ಗಾಂಧಿಯವರ ಸೂಚನೆಯಂತೆ ಈ ಹಗರಣ ನಡೆದಿದೆ. ಹಣವನ್ನು ಹೈಕಮಾಂಡಿಗೆ ಕಳುಹಿಸಲಾಗಿದೆ. ಚುನಾವಣಾ ಭ್ರಷ್ಟಾಚಾರಕ್ಕೆ ಹಣ ಬಳಸಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡ ಭ್ರಷ್ಟರು. ಅವರ ಅಕ್ರಮ ಹಣ ಈ ಹಿಂದೆ ಸಿಕ್ಕಿತ್ತು ಎಂದು ವಿವರಿಸಿದರು. ಸರ್ಕಾರಕ್ಕೆ ನೋಟಿಸ್ ಕೊಟ್ಟ ರಾಜ್ಯಪಾಲರಿಗೆ ಧನ್ಯವಾದ ಸಲ್ಲಿಸಿದರು.
ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಮಾತನಾಡಿ, ಇದು ಜನರ ಪಾದಯಾತ್ರೆ. ವಿಜಯೇಂದ್ರ-ಕುಮಾರಸ್ವಾಮಿ ಅವರು ಕೃಷ್ಣಾರ್ಜುನರಂತೆ ಇದನ್ನು ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಎಂದರೆ ಭ್ರಷ್ಟರ ಸರ್ಕಾರ, ಸುಳ್ಳರ ಸರ್ಕಾರ ಎಂದು ಟೀಕಿಸಿದರು. ಸಂವಿಧಾನವನ್ನು ಅವಮಾನ ಮಾಡಿದ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಕೊಡಬೇಕಿದೆ ಎಂದು ಆಗ್ರಹಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಕಾಂಗ್ರೆಸ್ಸಿನ ಡಿಎನ್‌ಎಯಲ್ಲೇ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ದೇಶದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿತ್ತು. ಆದರೆ, ವಾಜಪೇಯಿ, ನರೇಂದ್ರ ಮೋದಿಯವರ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪಗಳಿಲ್ಲ ಎಂದರು. ಕಲ್ಲಿದ್ದಲು, 2 ಜಿ ಸೇರಿ ಅನೇಕ ಹಗರಣಗಳು ಆಗ ನಡೆದಿದ್ದವು. ಈಗ ಸಿದ್ದರಾಮಯ್ಯನವರು ಇಂಥ ಹಗರಣಗಳನ್ನು ಮುಂದುವರೆಸಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರೇ ಈ ಹಗರಣ ನಿಮ್ಮ ಕೈಯಿಂದಲೇ ನಡೆದಿದೆ. ಭ್ರಷ್ಟತನ ಮುಚ್ಚಿಹಾಕಲು ರಾಜ್ಯಪಾಲರನ್ನು ಬೆದರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದ ಅವರು, ಕಾಂಗ್ರೆಸ್ ಹೈಕಮಾಂಡ್ ಕೂಡ ಇದರಲ್ಲಿ ಪಾಲುದಾರಿಕೆ ಪಡೆದಿದೆ ಎಂದು ಆಕ್ಷೇಪಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ನಾವು ನಿಲುವಳಿ ಸೂಚನೆ ಮೂಲಕ ಮುಡಾ ಹಗರಣದ ವಿವರ ಕೇಳಿದ್ದೆವು. ಮುಡಾದಲ್ಲಿ 3ರಿಂದ 4 ಸಾವಿರ ಕೋಟಿಯ ಹಗರಣ ಆಗಿದೆ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ವಿಪಕ್ಷದ ಹೋರಾಟದ ಹಕ್ಕನ್ನು ಮುಂದಿಟ್ಟು ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ದಲಿತ ವ್ಯಕ್ತಿಯ ಜಮೀನು ನುಂಗಿದ್ದಾರೆ. ಸಿದ್ದರಾಮಯ್ಯನವರು ತಪ್ಪು ಮಾಡದೆ ಇದ್ದರೆ ಅವರ‍್ಯಾಕೆ ರಾಜ್ಯಪಾಲರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಒಂದು ನೋಟಿಸ್‌ಗೇ ಕಾಂಗ್ರೆಸ್ಸಿಗರು ಗಡಗಡ ನಡುಗುತ್ತಿದ್ದಾರೆ ಎಂದರು. ಕಾಂಗ್ರೆಸ್ ಇವತ್ತು ಒಡೆದ ಮನೆಯಾಗಿದೆ ಎಂದು ಲೇವಡಿ ಮಾಡಿದರು.