ಶಿವಮೊಗ್ಗ: ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಕುಮಾರಸ್ವಾಮಿ ಯಾವುದೇ ತೊಂದರೆ ಇಲ್ಲದೆ ಆಡಳಿತ ನಡೆಸಿದ್ದರು ಎಂದು ಬಿಜಪಿ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ದೇಶದಲ್ಲಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳಲ್ಲಿ ದುರ್ಬಲ ಮುಖ್ಯಮಂತ್ರಿ ಎಂದರೆ ಸಿಎಂ ಕುಮಾರಸ್ವಾಮಿ. ಇದು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುವುದಿಲ್ಲ. 20 ತಿಂಗಳು ಮುಖ್ಯಮಂತ್ರಿಯಾದಾಗ ಬಿಜೆಪಿಯವರಿಂದ ಯಾವುದೇ ಸಮಸ್ಯೆಗಳನ್ನು ಎದುರಿಸಿರಲಿಲ್ಲ. ಆದರೆ ಕಾಂಗ್ರೆಸ್ ನಿಂದ ಅನೇಕ ತೊಂದರೆ ಅನುಭವಿಸುತ್ತಿದೆ ಎಂದು ಅವರೇ ಸ್ವತಃ ಹೇಳಿದ್ದಾರೆ. ಎಷ್ಟು ದಿನ ಈ ಸಿಎಂ ಆಗಿರುತ್ತೇನೋ ಗೊತ್ತಿಲ್ಲ ಅಂತ ಅವರೇ ಹೇಳಿದ್ದಾರೆ ಎಂದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವುದೇ ಕುಮಾರಸ್ವಾಮಿ ಅವರಿಗೆ ರಾಜ್ಯದಲ್ಲಿ ಒಂದು ದೊಡ್ಡ ಕೆಲಸ ಆಗಿ ಬಿಟ್ಟಿದೆ. ಕಾಂಗ್ರೆಸ್ ನಲ್ಲಿರುವ ಗುಂಪುಗಾರಿಕೆ ಹಾಗೂ ಸರ್ಕಾರದಲ್ಲಿನ ಆಂತರಿಕ ಗೊಂದಲಗಳಿಂದ ರಾಜ್ಯದ ಮೇಲೆ ಏನೂ ಗಮನ ಹರಿಸದೇ ಆಡಳಿತ ನಡೆಯುತ್ತಿದೆ. ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ತಮ್ಮಣ್ಣ ಅವರು ಬಂದಾಗ ಎಲ್ಲಾ ಸಮಸ್ಯೆಗಳು ಹಾಗೆ ಇದೆ. ಯಾವ ಸಮಸ್ಯೆಯನ್ನು ಕೂಡ ರಾಜ್ಯ ಸರ್ಕಾರ ಪರಿಹಾರ ಮಾಡಿಲ್ಲ ಎಂದು ದೂರಿದರು.
ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಅನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್ ನಿಂದಲೇ ಸಿಎಂ ತೊಂದರೆ ಅನುಭವಿಸುತ್ತಿದ್ದಾರೆ. ಡಿ.ಕೆ ಶಿವಕುಮಾರ್, ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಪರಸ್ಪರ ಬಡಿದಾಡುತ್ತಿರುವುದನ್ನು ಜನತೆ ನೋಡುತ್ತಿದ್ದಾರೆ ಎಂದರು.
ಬಿಜೆಪಿ ರೌಡಿಗಳ ಮೂಲಕ ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಸುತ್ತಿದೆ ಎನ್ನುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‍ನವರು ನನ್ನನ್ನು ಇಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲು ಸಿಎಂ ಕುಮಾರಸ್ವಾಮಿಗೆ ಶಕ್ತಿ ಇಲ್ಲ. ಇದನ್ನು ಹೇಳುವ ಬದಲು ಬಿಜೆಪಿ ಜೊತೆ ರೌಡಿಗಳ ಹೆಸರು ಸೇರಿಸಿ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv