– ಬೆಂಗ್ಳೂರಲ್ಲಿ ಬಿಎಸ್‍ವೈ, ಇತ್ತ ದೆಹಲಿಯಲ್ಲಿ ರಾಹುಲ್ ಗಾಂಧಿ ಮೀಟಿಂಗ್
ಬೆಂಗಳೂರು/ನವದೆಹಲಿ: ಬಿಜೆಪಿಯಲ್ಲಿ ಇನ್ನೂ ಸರ್ಕಾರ ಬೀಳಿಸುವ ರಾಜಕೀಯ ಚಟುವಟಿಕೆ ಜೀವಂತವಾಗಿದೆ. ಸಂಧಾನ ಸಕ್ಸಸ್ ಅಂತಾ ಮೈತ್ರಿ ಸರ್ಕಾರ ಹೇಳಿದ್ರೂ ಆಟ ಇನ್ನೂ ಬಾಕಿ ಇದೆ, ಕಾದು ನೋಡಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಬಿಜೆಪಿಯ ಮೆಗಾ ಆಪರೇಷನ್ ಟೀಂ ಗೇಮ್ ಮೇಲೆ ಗೇಮ್ ಆಡುತ್ತಿದೆ. ಈ ಮಧ್ಯೆ ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನ ಸಿತಾರಾ ಹಾಲ್‍ನಲ್ಲಿ ಬಿಜೆಪಿ ಶಾಸಕರ ಜತೆ ಬಿಎಸ್‍ವೈ ವಿಶೇಷ ಸಭೆ ನಡೆಸಲಿದ್ದಾರೆ. ರಾಜ್ಯ ಬಿಜೆಪಿ ವಿಶೇಷ ಸಭೆಯಲ್ಲಿ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ.
Advertisement
Advertisement
ಸಭೆಯಲ್ಲಿ ರಾಜ್ಯ ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳು ಕೂಡ ಭಾಗಿಯಾಗಲಿದ್ದು, ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಸೇರಿದಂತೆ ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ರಾಜ್ಯ ರಾಜಕಾರಣದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಚು ಚರ್ಚೆ ನಡೆಯಲಿದ್ದು, ಲೋಕಸಭಾ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಗಳಿವೆ.
Advertisement
ದೆಹಲಿಯಲ್ಲಿ ಕಾಂಗ್ರೆಸ್ ಸಭೆ:
ರಾಜ್ಯ ಕಾಂಗ್ರೆಸ್ಸಿನ ಬಂಡಾಯ ಮತ್ತು ಆಪರೇಷನ್ ಕಮಲದ ಹಿನ್ನೆಲೆಯಲ್ಲಿ ಇಂದು ರಾಹುಲ್ ಗಾಂಧಿ ಜೊತೆ ಅವರ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಭಾಗಿಯಾಗಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅನ್ಯ ಕೆಲಸದ ನಿಮಿತ್ತ ಭಾಗವಹಿಸುತ್ತಿಲ್ಲ. ಇನ್ನು ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ಡಿಕೆಶಿ ಕೂಡ ಭಾಗವಹಿಸುತ್ತಿಲ್ಲ.
Advertisement
ಏನೇನು ಚರ್ಚೆ ನಡೆಯಲಿದೆ?:
ಸಭೆಯಲ್ಲಿ ರಾಹುಲ್ ಗಾಂಧಿ ಅವರು ಆಪರೇಷನ್ ಕಮಲದ ಬಗ್ಗೆ ಚರ್ಚೆ ಸಾಧ್ಯತೆ ಇದೆ. ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗದಂತೆ ಎಚ್ಚರ ವಹಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇನ್ನು ಜಾರಕಿಹೊಳಿ ಸಹೋದರರ ಸಮಸ್ಯೆ ಆಲಿಸಲಿದ್ದಾರೆ. ಈ ಮೂಲಕ ಜಾರಕಿಹೊಳಿ ಸಹೋದರರ ಸಮಸ್ಯೆಗೆ ಇಂದು ಪರಿಹಾರ ಸಿಗುವ ಸಾಧ್ಯತೆಗಳಿವೆ. ಡಿ.ಕೆ. ಶಿವಕುಮಾರ್ ಅವರಿಂದಲೇ ಸಮಸ್ಯೆ ಆಗುತ್ತಿದೆಯಾ ಎಂಬ ಬಗ್ಗೆ ಚರ್ಚೆ ನಡೆಯಲಿದ್ದು, ಸಚಿವ ಸಂಪುಟ ವಿಸ್ತರಣೆ ಮಾಡುವ ಕುರಿತು ಮಾತುಕತೆ ನಡೆಯಲಿದೆ.
ಸಂಪುಟ ವಿಸ್ತರಣೆ ಬಳಿಕ ಅವಕಾಶ ವಂಚಿತರು ಬಂಡೇಳುವ ಸಾಧ್ಯತೆಗಳಿವೆ. ಬಂಡಾಯದ ಹಿನ್ನೆಲೆಯಲ್ಲಿ ಮಾಡಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚೆ, ನಿಗಮ ಮಂಡಳಿಗಳ ನೇಮಕದ ಬಗ್ಗೆಯೂ ಸಮಾಲೋಚನೆ, ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು, ಡಿ.ಕೆ. ಶಿವಕುಮಾರ್ ಮೇಲೆ ಇಡಿ ದೂರು ದಾಖಲಾಗಿರುವ ಬಗ್ಗೆ, ಡಿಕೆಶಿ ಬಂಧನವಾದರೆ ಏನು ಮಾಡಬೇಕೆಂಬ ಕುರಿತು, ರಾಜಕೀಯವಾಗಿ ಈ ವಿಷಯವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv