1951ರಿಂದ 1971ರವರೆಗೆ ಕರ್ನಾಟಕ ಮೈಸೂರು ಪ್ರಾಂತ್ಯ ಎಂದು ಕರೆಯಲ್ಪಡುತ್ತಿತ್ತು. 1951ರಲ್ಲಿ ಸ್ವತಂತ್ರ ಭಾರತದ ಮೊದಲ ಚುನಾವಣೆ ನಡೆದಾಗ ಮೈಸೂರು ಪ್ರಾಂತ್ಯದಲ್ಲಿ 9 ಕ್ಷೇತ್ರಗಳಿದ್ದವು. 9ರಲ್ಲಿ 9 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಈ ಚುನಾವಣೆಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಮೈಸೂರು ರಾಜ್ಯದಿಂದಲೂ ಕಾಂಗ್ರೆಸ್ ಪ್ರಮುಖ ಪಕ್ಷವಾಗಿತ್ತು. ಮೊದಲ ಚುನಾವಣೆ ಬಳಿಕ 1971ರಲ್ಲಿ ಕಾಂಗ್ರೆಸ್ 27ರಲ್ಲಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಬಾರಿಗೆ ಕ್ಲೀನ್ ಸ್ವೀಪ್ ಮಾಡಿತ್ತು.
1980ರಲ್ಲಿ ಬಿಜೆಪಿ ಸ್ಥಾಪನೆಯಾದರೂ 1984ರಲ್ಲಿ 2 ಸ್ಥಾನಗಳನ್ನು ಗೆಲ್ಲುವ ಮೂಲಕ ಜಯದ ರುಚಿಯನ್ನು ಕಂಡಿತ್ತು. ದೇಶದಲ್ಲಿ 1984ರಲ್ಲಿ ಗೆಲುವು ಸಿಕ್ಕರೂ, ಕರ್ನಾಟಕದಲ್ಲಿ 1991ರಲ್ಲಿ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆಯಿತು. 1991ರಲ್ಲಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದ ಸೀಟುಗಳು
ಕರ್ನಾಟಕ ರಾಜ್ಯ ರಚನೆಯಾದ ಬಳಿಕ ರಾಜ್ಯದಲ್ಲಿ 28 ಕ್ಷೇತ್ರಗಳು ಫಿಕ್ಸ್ ಆಯ್ತು. ಕ್ಷೇತ್ರ ಪುನರ್ ವಿಂಗಡನೆಯಾಗಿ ಹೊಸ ಹೊಸ ಕ್ಷೇತ್ರಗಳು ಹುಟ್ಟಿದರೂ ರಾಜ್ಯದ ಒಟ್ಟು ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. 1977ರಲ್ಲಿ 26, 1980ರಲ್ಲಿ 27, 1984ರಲ್ಲಿ 24, 1989ರಲ್ಲಿ 27, 1991ರಲ್ಲಿ 23, 1996ರಲ್ಲಿ 5, 1998ರಲ್ಲಿ 9, 1999ರಲ್ಲಿ 18, 2004ರಲ್ಲಿ 8, 2009ರಲ್ಲಿ 6 ಮತ್ತು 2014ರಲ್ಲಿ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.
ಕರ್ನಾಟಕದಲ್ಲಿ ಬಿಜೆಪಿ ಗೆದ್ದ ಸೀಟುಗಳು:
ಭಾರತೀಯ ಜನತಾ ಪಕ್ಷ 1991ರಲ್ಲಿ 4 ಸ್ಥಾನಗಳನ್ನು ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಖಾತೆ ತೆರೆಯಿತು. 1991ರಲ್ಲಿ 4, 1996ರಲ್ಲಿ 6, 1998ರಲ್ಲಿ 13, 1999ರಲ್ಲಿ 7, 2004ರಲ್ಲಿ 18, 2009ರಲ್ಲಿ 9 ಮತ್ತು 2014ರಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದೆ.
1980ರಲ್ಲಿ ಬಿಜೆಪಿ ಸ್ಥಾಪನೆಯಾದರೂ ಮೊದಲ ಗೆಲುವಿನ ರುಚಿ 1984ರಲ್ಲಿ ಸಿಕ್ಕಿತ್ತು. ಅಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನಗಳಿಸಲು ಮಾತ್ರ ಸಾಧ್ಯವಾಗಿತ್ತು. ಇದುವೇ ಬಿಜೆಪಿಯ ಇದುವರೆಗಿನ ಕನಿಷ್ಠ ಸಾಧನೆಯಾಗಿದೆ. 2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದಿತ್ತು. ಇದು ಬಿಜೆಪಿಯ ಇದುವರೆಗಿನ ಗರಿಷ್ಠ ಸಾಧನೆಯಾಗಿದೆ.