– ಕಾನೂನು ಚೌಕಟ್ಟನ್ನ ಬಿಟ್ಟು ನಿರ್ಧಾರ ತೆಗೆದುಕೊಂಡ್ರೆ ಸಹಿಸಲ್ಲ
– ಆಡಳಿತದಿಂದ ಕುಟುಂಬವನ್ನು ದೂರವಿಡಿ
ಬೆಂಗಳೂರು: ಕಾನೂನು ಚೌಕಟ್ಟನ್ನು ಬಿಟ್ಟು ನಿರ್ಧಾರ ತೆಗೆದುಕೊಂಡರೆ ಸಹಿಸಲ್ಲ ಎಂದು ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ.
ಅಮಿತ್ ಶಾ ಅವರು ಸಿಎಂ ಯಡಿಯೂರಪ್ಪ ಅವರಿಗೆ ಫೋನ್ ಕರೆ ಮಾಡಿ ಆರು ನಿಮಿಷ ಮಾತನಾಡಿದ್ದಾರೆ. ಈ ವೇಳೆ ಯಡಿಯೂರಪ್ಪನವರಿಗೆ ಮೂರು ಷರತ್ತು ಹಾಕಿದ್ದಾರೆ. ಜೊತೆಗೆ ಅಕ್ಟೋಬರ್ ತಿಂಗಳಾಂತ್ಯದವರೆಗೂ ಗಡುವು ನೀಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣೆ ಬ್ಯುಸಿಯಲ್ಲೂ ಅಮಿತ್ ಶಾ ಕರ್ನಾಟಕದ ಚಿಂತೆ ಮಾಡುತ್ತಿದ್ದಾರಂತೆ. ಹೀಗಾಗಿ ರಾಜ್ಯ ವಿಧಾನಸಭೆ ಅಧಿವೇಶನಕ್ಕೂ ಮೊದಲು ಅವರು ಸಿಎಂ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ಈ ವೇಳೆ ಅಮಿತ್ ಶಾ, ಮುಖ್ಯಮಂತ್ರಿಯಾಗಿ ಕಾನೂನಿನ ಚೌಕಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲು ಅಡ್ಡಿಪಡಿಸುವುದಿಲ್ಲ. ಆದರೆ ಚೌಕಟ್ಟನ್ನು ಮೀರಿ ನಿರ್ಧಾರಗಳನ್ನ ತೆಗೆದುಕೊಂಡರೆ ನಾವು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಷರತ್ತು ಏನು?
ಸಾಲು ಸಾಲು ವರ್ಗಾವಣೆ ಬಂದ್ ಮಾಡಿ, ಈ ಬಗ್ಗೆಯೇ ಹೆಚ್ಚು ಆರೋಪಗಳು ಕೇಳಿ ಬರುತ್ತಿವೆ. ಈಗ ಮಾಡಿದ್ದು ಸಾಕು, ಅಗತ್ಯ ಬಿಟ್ಟು ವರ್ಗಾವಣೆ ಮಾಡಬೇಡಿ. ಆಯಾ ಇಲಾಖೆಗಳ ಸಚಿವರಿಗೂ ಇದನ್ನೇ ಹೇಳಿಬಿಡಿ ಎಂದು ಶಾ ಮೊದಲ ಕಂಡೀಷನ್ ಹಾಕಿದ್ದಾರಂತೆ.
ಮುಖ್ಯಮಂತ್ರಿ ಕಚೇರಿ ಸ್ವಚ್ಛವಾಗಿಲ್ಲ, ಅದನ್ನು ನೀವು ಮಾಡಲೇಬೇಕು. ಸಿಎಂ ಕಚೇರಿ ಸುತ್ತ ಕ್ಲೀನ್ ಆಗಬೇಕು ಅಂತ ಹೇಳಿದ್ವಿ. ಆದರೆ 15 ದಿನಗಳು ಕಳೆದರೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಅಕ್ಟೋಬರ್ ಅಂತ್ಯದ ವೇಳೆಗೆ ಇದು ಸರಿ ಹೋಗಬೇಕು. ಜೊತೆಗೆ ದಕ್ಷ ಐಎಎಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳಬೇಕು ಎಂದು ಶಾ ಸೂಚನೆ ನೀಡಿದ್ದಾರೆ.
ಆಡಳಿತದಲ್ಲಿ ಮಾತ್ರ ಕುಟುಂಬ ದೂರ ಇಡಿ. ನಿಮ್ಮ ಕುಟುಂಬದ ಜತೆ ನೀವು ಇರಲು ಅಭ್ಯಂತರವಿಲ್ಲ. ಆದರೆ ವಿಧಾನಸಭೆ, ಗೃಹ ಕಚೇರಿ ಕೃಷ್ಣಾದಲ್ಲಿ ಕುಟುಂಬ ದೂರ ಇಡಿ. ಆಡಳಿದ ವಿಚಾರದಲ್ಲೂ ಕೂಡ ಕುಟುಂಬ ಸದಸ್ಯರು ಹಸ್ತಕ್ಷೇಪ ಮಾಡಬಾರದು. ಪರೋಕ್ಷವಾಗಿ, ನೇರವಾಗಿ ಹಸ್ತಕ್ಷೇಪವನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಗೃಹ ಸಚಿವ, ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ವಾರ್ನಿಂಗ್ ಬೆನ್ನಲ್ಲೇ ಸಿಎಂ ಈಗ ಕ್ಲೀನ್ ಆಂಡ್ ಡೈನಾಮಿಕ್ ಐಎಎಸ್ ಅಧಿಕಾರಿಗಳ ತಲಾಶ್‍ಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಕಚೇರಿಯ ನಾಲ್ವರು ಐಎಎಸ್ ಅಧಿಕಾರಿಗಳನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ಹಾಲಿ ಇರುವ ನಾಲ್ವರು ಅಧಿಕಾರಿಗಳ ತಲೆದಂಡ ಸಾಧ್ಯತೆ ಹೆಚ್ಚು ಎಂಬ ಮಾತು ಕೇಳಿ ಬರುತ್ತಿವೆ.
ಈ ಹಿಂದೆ ಓರ್ವ ಐಎಎಸ್ ಅಧಿಕಾರಿಯನ್ನು ಮಾತ್ರ ಮುಖ್ಯಮಂತ್ರಿ ಕಚೇರಿಯಿಂದ ಎತ್ತಂಗಡಿ ಮಾಡಲಾಗಿತ್ತು. ಈಗ ಪೂರ್ಣ ಪ್ರಮಾಣದಲ್ಲಿ ಸಿಎಂ ಕಚೇರಿ ಆಪರೇಷನ್ ಕ್ಲೀನ್‍ಗೆ ಹೈಕಮಾಂಡ್ ಸೂಚಿಸಿದೆ.