ನವದೆಹಲಿ: ಮಹಾರಾಷ್ಟ್ರ ಮತ್ತು ಹರ್ಯಾಣದ ಮತ ಎಣಿಕೆ ಆರಂಭಗೊಂಡಿದ್ದು, ಬೆಳಗ್ಗೆ 8 ಗಂಟೆಯಿಂದಲೂ ಬಿಜೆಪಿ ಮುನ್ನಡೆಯಲ್ಲಿದ್ದು, ಟ್ರೆಂಡ್ ಗಮನಿಸುವಾಗ ಸಮೀಕ್ಷೆಗಳಂತೆ ಹೇಳಿದಂತೆ ಮತ್ತೆ ಕಮಲ ಅಧಿಕಾರಕ್ಕೆ ಏರುವುದು ನಿಚ್ಚಳವಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ 180 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ 63 ಇತರರು 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಹರ್ಯಾಣದಲ್ಲಿ 54 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ 23 ಕ್ಷೇತ್ರಗಳಲ್ಲಿ ಕಾಂಗ್ರೆಸ್, 9 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ.
2014ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನೆ, ಎನ್‍ಸಿಪಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಿತ್ತು. ಹೀಗಾಗಿ ಯಾವೊಂದು ಪಕ್ಷ ಬಹುಮತ ಸಾಧಿಸಿರಲಿಲ್ಲ. 288 ಕ್ಷೇತ್ರಗಳಿರುವ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಸ್ಥಾನ ಬೇಕಿದ್ದು, ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42, ಶರದ್ ಪವಾರ್ ನೇತೃತ್ವದ ಎನ್‍ಸಿಪಿ 41 ರಲ್ಲಿ ಜಯಗಳಿಸಿತ್ತು. ಬಿಜೆಪಿ, ಶಿವಸೇನೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ದೇವೇಂದ್ರ ಫಡ್ನಾವಿಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಪರಿಣಾಮ ಒಟ್ಟು 48 ರಲ್ಲಿ 41ರಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 5, ಇತರೇ ಎರಡು ಕ್ಷೇತ್ರಗಳಲ್ಲಿ ಗೆದ್ದುಕೊಂಡಿತ್ತು.
2014ರ ಹರ್ಯಾಣ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳಿದ್ದು 47 ಸ್ಥಾನಗಳನ್ನು ಬಿಜೆಪಿ ಜಯಗಳಿಸುವ ಮೂಲಕ ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದರು. ಓಂ ಪ್ರಕಾಶ್ ಚೌಟಾಲ ನೇತೃತ್ವದ ಇಂಡಿಯನ್ ನ್ಯಾಷನಲ್ ಲೋಕ್ ದಳ 19, ಕಾಂಗ್ರೆಸ್ 15 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಎಲ್ಲ 10 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು.