ಅಹಮದಾಬಾದ್: ಬಹುನಿರೀಕ್ಷಿತ ಗುಜರಾತ್ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಬಿಜೆಪಿಗೆ ಆರಂಭಿಕ ಮುನ್ನಡೆ ಸಿಕ್ಕಿದೆ.
8 ಗಂಟೆ ವೇಳೆಗೆ ಒಟ್ಟು 182 ಕ್ಷೇತ್ರಗಳಲ್ಲಿ ಬಿಜೆಪಿ 22 ರಲ್ಲಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿತ್ತು. ಇತ್ತೀಚಿನ ವರದಿಗಳ ಪ್ರಕಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 10 ಗಂಟೆ ಹೊತ್ತಿಗೆ ನಿಖರವಾಗಿ ಫಲಿತಾಂಶ ಹೊರಬೀಳಲಿದ್ದು, ಗಾಂಧಿನಾಡು ಯಾರ ಪಾಲಾಗಲಿದೆ ಎಂಬುದು ಸ್ಪಷ್ಟವಾಗಲಿದೆ.
2012ರ ಚುನಾವಣೆಯಲ್ಲಿ 47% ಮತ ಪಡೆಯುವ ಮೂಲಕ ಬಿಜೆಪಿ 115 ಸ್ಥಾನಗಳನ್ನು ಗಳಿಸಿದ್ದರೆ, 38.9% ಮತ ಪಡೆದ ಕಾಂಗ್ರೆಸ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಈಗಾಗಲೇ ಸಮೀಕ್ಷೆಗಳು ಗುಜರಾತ್‍ನಲ್ಲಿ ಕಮಲ ಅರಳಲಿದೆ ಅಂತ ಬಿಜೆಪಿ ಪಾಳಯಕ್ಕೆ ಖುಷಿ ಸುದ್ದಿ ಕೊಟ್ಟಿವೆ. ಈ ಸಮೀಕ್ಷೆಗಳಿಂದ ಬಿಜೆಪಿ ಶಕ್ತಿ ಇನ್ನಷ್ಟು ಜಾಸ್ತಿ ಆಗಿದೆ. ಹೀಗಾಗಿ ಫಲಿತಾಂಶ ಬಂದ ಬಳಿಕ ಮುಂದೆ ಚುನಾವಣೆ ಎದುರಿಸಲಿರೋ ಕರ್ನಾಟಕದತ್ತ ಬಿಜೆಪಿ ಗಮನ ಹರಿಸಲು ನಿಚ್ಚಳವಾಗಿದೆ.
ಆದ್ರೆ ಕಾಂಗ್ರೆಸ್ ಮಾತ್ರ ಗುಜರಾತ್‍ನಲ್ಲಿ ಸೋತ್ರು, ಗೆದ್ರು ಸತತ ಎರಡನೇ ಬಾರಿಗೆ ಕರ್ನಾಟಕದಲ್ಲಿ ತಮ್ಮ ಸರ್ಕಾರವನ್ನ ರಚಿಸಬೇಕೆಂಬ ಹಠಕ್ಕೆ ಬಿದ್ದಿವೆ. ಇನ್ನು ರಾಜಸ್ತಾನ, ಈಶಾನ್ಯ ರಾಜ್ಯಗಳ ಚುನಾವಣೆ ಮೇಲೂ ಗುಜರಾತ್ ಫಲಿತಾಂಶ ನಿರ್ಣಾಯಕವಾಗಲಿದೆ. 2019ರ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ.