-ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ
-ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಾತಿ ರಾಜಕೀಯ
ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಾತಿ ರಾಜಕೀಯ ನಡಿಯುತ್ತಿರುವ ಆರೋಪ ಕೇಳಿಬರುತ್ತಿದ್ದು, ಸಿಎಂ ಯಡಿಯೂರಪ್ಪ ಅಷ್ಟೇ ಅಲ್ಲ ಸಿಎಂ ಬೆಂಬಲಿಗರನ್ನೂ ಕೂಡ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.
ಯಡಿಯೂರಪ್ಪನವರ ಆಪ್ತರೆಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೆಲವರಿಗೆ ಗೇಟ್ ಪಾಸ್ ನೀಡಲಾಗಿದೆ. ಹಾಗೆಯೇ ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ ಎನ್ನುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಸಿಎಂ ಬೆಂಬಲಿಗ ನಂಜುಂಡಸ್ವಾಮಿ ಆರೋಪಿಸಿದ್ದಾರೆ. ಬಹಿರಂಗವಾಗಿ ವೀಡಿಯೋದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ನಂಜುಂಡಸ್ವಾಮಿ, ಸಿಎಂ ಬೆಂಬಲಿಗರು ಎಂಬ ಕಾರಣಕ್ಕೆ ತಮ್ಮ ಪಕ್ಷದಲ್ಲಿ ಭೇದಭಾವ ಮಾಡಲಾಗುತ್ತಿದೆ ಎಂದು ಹೇಳಿಕೊಂಡರು.
Advertisement
Advertisement
ಲಿಂಗಾಯತರು, ಯಡಿಯೂರಪ್ಪನವರು ಆಪ್ತರೆಂದು ನಮಗೆ ಬಿಜೆಪಿ ಕಚೇರಿಯಲ್ಲಿ ಪ್ರವೇಶ ನೀಡುತ್ತಿಲ್ಲ ಎಂದು ನಂಜುಂಡಸ್ವಾಮಿ ಬಹಿರಂಗ ಆರೋಪಿ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಕಚೇರಿಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರನ್ನು ಕೂಡ ಕೆಲಸದಿಂದ ತೆಗೆದಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇದೀಗ ಬಿಜೆಪಿ ಕಚೇರಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ನಂಜುಂಡಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
Advertisement
14 ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ನಾನು ಕೆಲಸ ಮಾಡಿದ್ದು ಸಾರ್ಥಕವಾಯ್ತು ಎಂದುಕೊಂಡಿದ್ದೆ, ಆದ್ರೆ ಅದು ಸಾರ್ಥಕವಾಗಿಲ್ಲ. ಬಿಜೆಪಿ ನಮ್ಮ ಹೆತ್ತ ತಾಯಿ ಎಂದು ತಿಳಿದುಕೊಂಡಿದ್ದೆವು. ಆದ್ರೆ ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಅಧ್ಯಕ್ಷರಾಗಿದ್ದಾಗ ಪಕ್ಷವನ್ನು ಬೆಳೆಸಿದರು. ಆದರೆ ಪ್ರಸ್ತುತವಾಗಿ ಬಂದಿರುವ ಅಧ್ಯಕ್ಷರು ಲಿಂಗಾಯತರನ್ನ ಟಾರ್ಗೆಟ್ ಮಾಡಿಕೊಂಡು ಸುಮಾರು 5ರಿಂದ 6 ಮಂದಿ ಕೆಲಸಗಾರರನ್ನು ತೆಗೆದು ಹಾಕಿದ್ದಾರೆ. ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ ಎನ್ನುತ್ತಾರೆ. 14 ವರ್ಷ ನಾವು ದುಡಿದ ಶ್ರಮ ಎಲ್ಲಿ ಹೋಯ್ತು? ಬಿಎಸ್‍ವೈ ಬೆಂಬಲಿಗರು ಎಂದು ಟಾರ್ಗೆಟ್ ಮಾಡಲಾಗುತ್ತಿದೆ. ಏಕಾಏಕಿ ಕೆಲಸದಿಂದ ಕೆಲಸಗಾರರನ್ನು ತೆಗೆದು ಹಾಕಿದರೆ ಅವರು ಹಾಗೂ ಅವರ ಕುಟುಂಬದ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
Advertisement
ಬಿಎಸ್‍ವೈ ಅಧ್ಯಕ್ಷರಾಗಿದ್ದಾಗ ಪಕ್ಷದಲ್ಲಿ ಎಲ್ಲಾ ಜಾತಿಯ ಸಿಬ್ಬಂದಿ ಕೂಡ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರು ಬರಬೇಡಿ, ನೀವು ಬರಬೇಡಿ ಎಂದು ಹೇಳುತ್ತಿದ್ದಾರೆ. ಹಾಗಾದರೆ ನಮ್ಮನ್ನು ಪಕ್ಷಕ್ಕೆ ಸದಸ್ಯರಾಗಿ ಮಾಡಿಕೊಂಡಿದ್ದು ಯಾಕೆ? ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ ಅವರಿಗೆ ಏನು ತಿಳಿಯುತ್ತೆ? ಯಡಿಯೂರಪ್ಪ ಇಲ್ಲವಾದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗಿಬಿಡುತ್ತೆ. ಉತ್ತರ ಕರ್ನಾಟಕ ನೆರೆ ಪರಿಹಾರ ಕೊಡಬೇಕು ಎಂದು ಬಿಎಸ್‍ವೈ ಮುನ್ನುಗ್ಗುತ್ತಿದ್ದಾರೆ. ಆದರೆ ಈಗ ಅಂಥವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ತಮ್ಮ ಪಕ್ಷದ ವಿರುದ್ಧವೇ ಬಿಜೆಪಿ ಕಾರ್ಯಕರ್ತ ಕಿಡಿಕಾರಿದರು.
ವಿಧಾನಸೌಧ, ವಿಧಾನಸಭೆಯಲ್ಲಿ ಯಾರೂ ಕೂಡ ಯಡಿಯೂರಪ್ಪ ಅವರನ್ನ ಬೈಯ್ಯುತ್ತಲ್ಲ. ಆದರೆ ನಮ್ಮ ಪಕ್ಷದಲ್ಲಿ ಸೇರಿಕೊಂಡಿರುವ ಕೆಲವು ಹುಳಗಳು ಸಿಎಂನಾ ಮೂಲೆಗುಂಪು ಮಾಡಲು ಪ್ಲಾನ್ ಹಾಕಿದ್ದಾರೆ ಎಂದರು. ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕೂಡ ಎಚ್ಚರಿಸಿದ್ದಾರೆ. ನೀವು ಹೀಗೆ ಕಚೇರಿಯಲ್ಲಿ ತಾರತಮ್ಯ ಮಾಡುತ್ತೀರಿ, ಲಿಂಗಾಯರು ಎಂದು ಬೇಧ ಮಾಡಿದರೆ ನಿಜವಾಗಿಯೂ ಮುಂದಿನ ಚುವಾವಣೆಯಲ್ಲಿ 40%ದಷ್ಟು ಕೂಡ ಮತ ಬೀಳಲ್ಲ. ಬಿಎಸ್‍ವೈ ಪಕ್ಷ ಕಟ್ಟಿದ್ದಾಗ ಬಿಜೆಪಿ ಸ್ಥಿತಿ ಹೇಗಿತ್ತು ಈಗ ಹೇಗಿದೆ ಎನ್ನುವುದನ್ನು ಮರೆಯಬೇಡಿ. ನೀವು ಹೀಗೆ ತಾರತಮ್ಯ ಮಾಡುತ್ತಿದ್ದರೆ ಬಜೆಪಿ ವಿರೋಧ ಪಕ್ಷದಲ್ಲಿ ಕೂರುವಷ್ಟು ಸೀಟು ಗೆಲ್ಲಲ್ಲ ಎಂದರು.
ಹಾಗೆಯೇ ಅಮಿತ್ ಶಾ ಅವರ ಬಗ್ಗೆ ಮಾತನಾಡಿ, ನೀವು ನೆರೆ ವೀಕ್ಷಣೆಗೆ ಬಂದು ಕರ್ನಾಟಕದ ಪರಿಸ್ಥಿತಿ ಬಗ್ಗೆ ತಿಳಿದಿದ್ದೀರಾ. ಆದರೂ ಪರಿಹಾರ ಬಿಡುಗಡೆ ಮಾಡಲು ಏಕೆ ತಡಮಾಡಿದ್ದೀರಾ? ಬೇರೆ ರಾಜ್ಯಗಳಿಗೆ ಎಂದು ರೀತಿ, ಕರ್ನಾಟಕ್ಕೆ ಒಂದು ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಈವರೆಗೂ ಬಿಎಸ್‍ವೈ ಜಾತಿ ರಾಜಕೀಯ ಮಾಡಿಲ್ಲ, ಮುಂದೆಯೂ ಮಾಡಲ್ಲ. ಇದನ್ನು ನಳಿನ್ ಕುಮಾರ್ ಕಟೀಲ್ ತಿಳಿದುಕೊಳ್ಳಬೇಕು. ಯಡಿಯೂರಪ್ಪ ಇದ್ರೆ ಬಿಜೆಪಿ, ಈಗ ಅವರು ಬೇಡ ಎಂದು ಬೇರೆಯವರು ತಿಳಿದುಕೊಂಡಿದ್ದರೆ ಅದು ಅವರ ಮೂರ್ಖತನ. ಮೋದಿ ಅವರೊಬ್ಬರನ್ನೇ ನೋಡಿ ಬಿಜೆಪಿಗೆ ಜನ ಮತ ಹಾಕಿಲ್ಲ. ಕನಾಟಕದಲ್ಲಿ ಯಡಿಯೂರಪ್ಪ ಅವರನ್ನು ನೋಡಿ ಮತ ಹಾಕಿದ್ದಾರೆ. ಮೋದಿ ಅವರಿಗೆ ಹಳ್ಳಿಗಳ ಬಗ್ಗೆ ಏನು ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.