ಚಿಕ್ಕೋಡಿ/ಬೆಳಗಾವಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಜನ ಹಾಗೂ ವಾಹನ ಸಂಚಾರ ಕಡಿಮೆ ಆಗಿರುವ ಕಾರಣ ನಗರ ಪ್ರದೇಶಕ್ಕೆ ಕಾಡು ಕೋಣಗಳು ಲಗ್ಗೆ ಇಟ್ಟಿವೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ಸುಮಾರು 25 ಕಿ.ಮೀ ದೂರದ ಕಾಡಿನಿಂದ 3 ಕಾಡು ಕೋಣಗಳು ಆಗಮಿಸಿ ಜನರಲ್ಲಿ ಅಚ್ಚರಿ ಮೂಡಿಸಿವೆ. ಸಂಕೇಶ್ವರ ಪಟ್ಟಣದ ಹೊರ ವಲಯದ ಜಮೀನುಗಳಿಗೆ ಆಹಾರ ಹುಡುಕಿಕೊಂಡು ಕಾಡುಕೋಣಗಳು ಬಂದಿದ್ದವು.
ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಕಾಡು ಕೋಣಗಳ ಆಗಮನದ ಕುರಿತು ಮಾಹಿತಿ ತಿಳಿಸಿದ್ದಾರೆ. ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಸುತ್ತಾಡುತ್ತಿದ್ದ ಕಾಡು ಕೋಣಗಳನ್ನ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪಟಾಕಿ ಸಿಡಿಸಿ ಅರಣ್ಯ ಪ್ರದೇಶದತ್ತ ಓಡಿಸುವ ಕಾರ್ಯ ಮಾಡಿದ್ದಾರೆ.
ಸಂಕೇಶ್ವರ ಪಟ್ಟಣದಲ್ಲಿ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಹಿನ್ನೆಲೆಯಲ್ಲಿ ಸಂಕೇಶ್ವರ ಪಟ್ಟಣ ಸಂಪೂರ್ಣ ಸೀಲ್‍ಡೌನ್ ಆಗಿದೆ. ಜನ ಸಂಚಾರ ಇಲ್ಲದ ಕಾರಣ ಕಾಡು ಕೋಣಗಳು ಆಹಾರ ಹುಡುಕುತ್ತಾ ಈ ಕಡೆ ಬಂದಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.