ಬಾಲಿವುಡ್ ನಟ ಸಲ್ಮಾನ್ ಖಾನ್ ಪರವಾಗಿ ನಿಂತಿರುವ ಮತ್ತು ಸಲ್ಮಾನ್ ಕುರಿತಾಗಿ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡುವ ರಾಖಿ ಸಾವಂತ್ (Rakhi Sawant) ಗೆ ಲಾರೆನ್ಸ್ ಬಿಷ್ಣೋಯ್ ಟೀಮ್ ನಿಂದ ಬೆದರಿಕೆ ಕರೆ ಬಂದಿದೆಯಂತೆ. ಈ ಕುರಿತು ರಾಖಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ವಿಚಾರವಾಗಿ ಮೂಗು ತೂರಿಸಿದಂತೆ ರಾಖಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿದೆಯಂತೆ.
ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ (Mumbai) ಪೊಲೀಸರು (Police) ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಅಲ್ಲದೇ, ಸುಖಾಸುಮ್ಮನೆ ಅವರ ಮನೆ ಸುತ್ತ ಓಡಾಡುವಂತಿಲ್ಲ ಹಾಗೂ ಮನೆಯ ಮುಂದೆ ನಿಲ್ಲುವಂತಿಲ್ಲ ಎಂದು ಮುಂಬೈ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ
ಈಗಾಗಲೇ ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ಮುಂದಾಗಿದ್ದಾರೆ.
ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್ ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾನೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ.
ಸಲ್ಮಾನ್ ಖಾನ್ ಜೀವ ಉಳಿಯಬೇಕು ಎಂದರೆ, ತನ್ನ ಮಾತನ್ನು ಕೇಳಲೇಬೇಕು ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ. ಯಾವುದೋ ಜಾಗದಲ್ಲಿ ನಿಂತು ಕ್ಷಮೆ ಕೇಳಿದರೆ ನಾವು ಒಪ್ಪುವುದಿಲ್ಲ. ಬಿಕಾನೇರ್ ನಲ್ಲಿರುವ ಅವರ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಮಾತನಾಡಿದ್ದಾನೆ. ಸಲ್ಮಾನ್ ಖಾನ್ ಗೆ ತುಂಬಾ ಅಹಂ ಇದೆ. ಆ ನಟನಿಗೆ ಅಂಗರಕ್ಷಕರು ಇಲ್ಲದಿದ್ದರೆ ಇಷ್ಟೊತ್ತಿಗೆ ಪ್ರಾಣ ಹೋಗಿರುತ್ತಿತ್ತು ಎಂದಿದ್ದಾನೆ. ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾದರೂ, ಅವರು ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳುವತನಕ ಈ ಯುದ್ಧ ನಿಲ್ಲುವುದಿಲ್ಲ. ಮುಂದಿನ ಎಲ್ಲ ಪರಿಣಾಮಗಳಿಗೆ ಸಲ್ಮಾನ್ ಸಿದ್ಧವಾಗಿರಬೇಕು ಎಂದು ಲಾರೆನ್ಸ್ ಗುಡುಗಿದ್ದಾನೆ.