ನವದೆಹಲಿ: ದೂರದಲ್ಲಿದ್ದ ಜನರಿಗೆ ನಾನು ಬಿಸ್ಕೆಟ್ ಎಸೆದಿದ್ದನ್ನು ವಿವಾದ ಮಾಡಿದ್ದರು. ಇದೀಗ ಅವರು ಹೇಗೆ ಪ್ರವಾಹ ಪರಿಸ್ಥಿತಿ ನಿಭಾಯಿಸುತ್ತಾರೋ ಕಾದು ನೋಡೋಣ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರವಾಹ ಪರಿಸ್ಥಿತಿ ಎದುರಿಸಲು ಕೂಡಲೇ ಸರ್ಕಾರ ಕಾರ್ಯ ಪ್ರವೃತ್ತವಾಗಬೇಕು. ಹಾನಿಗೊಳಗಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಇದನ್ನು ಹೊರತು ಪಡಿಸಿ ರಾಜ್ಯ ಸರ್ಕಾರದ ಕಾರ್ಯ ವೈಖರಿ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆ ಭಾಗದ ಜನರೇ ಈ ಕುರಿತು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಕಳೆದ ಬಾರಿ ಮಡಿಕೇರಿ ಭಾಗದಲ್ಲಿ ಪ್ರವಾಹ ಉಂಟಾದಾಗ ದೂರದಲ್ಲಿ ಇದ್ದ ಜನರಿಗೆ ನಾನು ಬಿಸ್ಕೆಟ್ ಎಸೆದಿದ್ದನ್ನೇ ವಿವಾದ ಮಾಡಿದ್ದರು. ನಾನು ಇದೀಗ ಆ ರೀತಿಯ ವಿವಾದ ಮಾಡಲು ಹೋಗುವುದಿಲ್ಲ. ಸಂಪುಟ ರಚನೆ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಸಂಪುಟ ರಚನೆ ಮಾಡುವುದು ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
Advertisement
ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಸಚಿವ ಸಂಪುಟದ ಕುರಿತು ನಿರ್ಧರಿಸಲಿದೆ. ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಆಡಿದ ಮಾತಿಗೆ ತಕ್ಕಂತೆ ನಡೆದುಕೊಳ್ಳಲಿ. ಸರ್ಕಾರದಲ್ಲಿ ಕುಮಾರಸ್ವಾಮಿಯವರು ಉಳಿಸಿರುವ ಹಣದಲ್ಲೇ ಪ್ರವಾಹ ಪರಿಸ್ಥಿತಿ ನಿಭಾಯಿಸಲಿ ಎಂದು ಸಲಹೆ ನೀಡಿದರು.