ಮಡಿಕೇರಿ: ಆ ಊರಿನಲ್ಲಿ ಬಡ ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ (Kidney Patients) ಖಾಸಗಿ ಸಂಸ್ಥೆಯೊಂದು ಉಚಿತವಾಗಿ ಡಯಾಲಿಸಿಸ್ ಮಾಡುವ ಮೂಲಕ ಆಶ್ರಯವಾಗಿತ್ತು. ಆದರೆ ದಿನ ಕಳೆದಂತೆ ಆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಉಚಿತವಾಗಿ ಡಯಲಿಸಿಸ್ ಮಾಡುವುದೇ ಕಷ್ಟಕರವಾಗಿದ್ದ ಸಂದರ್ಭದಲ್ಲಿ ಯುವಕರ ತಂಡ ವಿಭಿನ್ನ ಚಿಂತನೆಯೊಂದಿಗೆ ನೆರವಾಗಿದೆ. ʻಬಿರಿಯಾನಿ ಚಾಲೆಂಜ್ʼ (Biryani Challenge) ಎನ್ನುವ ವಿಭಿನ್ನ ಚಿಂತನೆಯೊಂದಿಗೆ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಆ ಸಂಸ್ಥೆಗೆ ನೀಡಿದೆ. ಏನ್ನಿದು ಬಿರಿಯಾನಿ ಚಾಲೆಂಜ್ ಅಂತೀರಾ ಮುಂದೆ ಓದಿ…
ಮನುಷ್ಯರು ಒಳ್ಳೆಯವರಾದ್ರೆ ಸಾಲದು ಒಳ್ಳೆಯ ಕೆಲಸಗಳನ್ನ ಮಾಡಬೇಕು ಆಗ ಮಾತ್ರ ನಾವು ಸಮಾಜ ಸೇವಕರು ಎನಿಸಿಕೊಳ್ಳಲು ಸಾಧ್ಯ. ಯೆಸ್ ಅಂಥಹದ್ದೊಂದು ಕೆಲಸವನ್ನ ಕೊಡಗಿನ ಯುವಕರ ಗುಂಪು ಮಾಡ್ತಿದೆ. ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಸೇವೆ ನೀಡಲು ಯುವಕರ ತಂಡವೊಂದು ನಿರ್ಧರಿಸಿದೆ. ಇದರಿಂದ ಬಡ ರೋಗಿಗಳ ಪಾಲಿನ ಆಶಾಕಿರಣ ಎನಿಸಿದ್ದಾರೆ. ತಾಲ್ಲೂಕಿನಲ್ಲಿ ʻದಯಾ ರಿಯಾಬ್ಲಿಟೇಷನ್ ಟ್ರಸ್ಟ್ ತಣಲ್ʼ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸಲಾದ ಡಯಾಲಿಸಿಸ್ ಕೇಂದ್ರವು ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿತ್ತು. ದಾನಿಗಳ ಸಹಕಾರದೊಂದಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಸೇವೆಯನ್ನ ನೀಡುತ್ತಿರುವ ಈ ಸಂಸ್ಥೆ ಈಗ ಸಾಲದ ಸುಳಿಯಲ್ಲಿ ಸಿಲುಕಿದೆ. ಕಳೆದ 6 ವರ್ಷಗಳಲ್ಲಿ ಸುಮಾರು 34 ರೋಗಿಗಳಿಗೆ 8,208 ಡಯಾಲಿಸಿಸ್ ಸೇವೆಯನ್ನ ನೀಡಿದ್ದು, 7 ಮಂದಿ ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆಯನ್ನು ನೀಡುತ್ತಿದೆ.
ಡಯಾಲಿಸಿಸ್ ಘಟಕ ಆರ್ಥಿಕ ಸಂಕಷ್ಟದಿಂದ ಪಾರುಮಾಡುವ ನಿಟ್ಟಿನಲ್ಲಿ ಬಿರಿಯಾನಿ ಚಾಲೆಂಜ್ ಎಂಬ ವಿನೂತನ ಕಾರ್ಯಕ್ರಮವನ್ನು ಯುವಕರ ತಂಡ ಪರಿಚಯಿಸಿತ್ತು. ದಾನಿಗಳಿಂದ ಬಿರಿಯಾನಿ ತಯಾರಿಕೆಗೆ ಬೇಕಾದ ಅಕ್ಕಿ, ಮಾಂಸ, ಸಂಬಾರ ಪದಾರ್ಥಗಳನ್ನು ಸಂಗ್ರಹಿಸಿ ಬಿರಿಯಾನಿ ತಯಾರಿಸಿ ನಂತರ ಇದನ್ನು ಸಂಘ ಸಂಸ್ಥೆಗಳು, ಕಚೇರಿಗಳು, ಮನೆಗಳಿಗೆ ಮಾರಾಟ ಮಾಡಿ, ಬಂದ ಹಣವನ್ನು ಸಂಸ್ಥೆಗೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಶಾದಿ ಮಾಹಲ್‌ನಲ್ಲಿ ಬಿರಿಯಾನಿ ತಯಾರಿಸಿ 200ಕ್ಕೂ ಅಧಿಕ ಯುವಕರು ಮಧ್ಯಾಹ್ನ ಸಮಯದಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಬಿರಿಯಾನಿಗಳನ್ನು ಮಾರಾಟ ಮಾಡಿದ್ದಾರೆ. ಸುಮಾರು 12 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ ಡಯಾಲಿಸಿಸ್ ಸೆಂಟರ್‌ನ ವ್ಯವಸ್ಥಾಪಕರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಒಟ್ನಲ್ಲಿ ಬಡ ಕಿಡ್ನಿ ರೋಗಿಗಳಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿರುವ ಡಯಾಲಿಸಿಸ್ ಕೇಂದ್ರ ನಿರ್ವಹಣೆಗೆ 1.75 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳವರೆಗೆ ವೆಚ್ಚವಾಗುತ್ತಿದೆ. ಅಲ್ಲದೆ ಸಂಸ್ಥೆ ಪ್ರಸ್ತುತ 5 ಲಕ್ಷ ರೂ. ಸಾಲ ಹೊಂದಿದೆ. ಬಿರಿಯಾನಿ ಚಾಲೆಂಜ್ ಮೂಲಕ ಈ ಸಾಲ ಪಾವತಿಸುವುದರೊಂದಿಗೆ ನೆರವು ಒದಗಿಸುವ ಪ್ರಯತ್ನವನ್ನು ಯುವಕರ ತಂಡ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.



