ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಮತ್ತೊಂದು ವಾರ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ಖಾಲಿ ಇರುವ ಕಾಂಗ್ರೆಸ್‍ನ ಆರು ಸಚಿವ ಸ್ಥಾನಗಳಿಗೆ ಸದ್ಯಕ್ಕೆ ಭರ್ತಿ ಭಾಗ್ಯವಿಲ್ಲ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಏಕ ಕಾಲದಲ್ಲಿ ನಿಗಮ ಮಂಡಳಿ ನೇಮಕ ಮತ್ತು ಸಂಪುಟ ವಿಸ್ತರಣೆ ಆಗಲಿದೆ. ಈ ಕುರಿತು ಡಿಸಿಎಂ ಜಿ. ಪರಮೇಶ್ವರ್ ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬುಲಾವ್ ನೀಡಿದ್ದಾರೆ.
ಮಂಗಳವಾರ ಎಐಇಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ಜಿ ಪರಮೇಶ್ವರ್ ಅವರು ರಾಗಾರಿಗೆ ಶುಭಾಶಯ ಕೋರಲು ಹೋಗಿದ್ದರು. ಈ ವೇಳೆ ರಾಜಕೀಯ ಬೆಳವಣಿಗೆ ಚರ್ಚಿಸಲು ಸಮಯ ನೀಡುವಂತೆ ಹೈಕಮಾಂಡ್ ಬಳಿ ಡಿಸಿಎಂ ಕೇಳಿದ್ದಾರೆ. ಆಗ ರಾಹುಲ್ ಗಾಂಧಿ ಅವರು ಮುಂದಿನ ವಾರ ಬಂದು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸುವಂತೆ ಸೂಚನೆ ಸೂಚಿಸಿದ್ದಾರೆ.
ಹೀಗಾಗಿ ಮುಂದಿನ ವಾರ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಕುರಿತು ಚರ್ಚೆ ನಡೆಸಲಿದ್ದು, ರಾಹುಲ್ ಜೊತೆಗೆ ಪರಮೇಶ್ವರ್ ಚರ್ಚೆ ಬಳಿಕ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಲಿದೆ ಎಂಬುದಾಗಿ ತಿಳಿದುಬಂದಿದೆ.
ಸಚಿವ ಸ್ಥಾನ ಹಂಚಿಕೆ ಸಮಸ್ಯೆ ಇನ್ನು ಬಾಕಿ ಇರುವಂತೆ ಇತ್ತ ಸಿಎಂ ಹಾಗೂ ಡಿಸಿಎಂ ಮಧ್ಯೆ ಖಾತೆ ಹಂಚಿಕೆಯಲ್ಲಿ ಮನಸ್ತಾಪ ಎದುರಾಗುತ್ತಿದೆಯಂತೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನಡುವೆ ಖಾತೆ ಹಂಚಿಕೆಗಾಗಿ ಹಗ್ಗ ಜಗ್ಗಾಟ ಪ್ರಾರಂಭವಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಪರಮೇಶ್ವರ್ ಅವರು ಸದ್ಯ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಟ್ (ಬಿಎಂಆರ್‌ಸಿಎಲ್) ಖಾತೆಯೂ ಬೇಕೆಂದು ಪಟ್ಟು ಹಿಡಿದಿದ್ದಾರೆ. ನಾನು ಈಗಾಗಲೇ ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವೆ. ಹೀಗಾಗಿ ಬಿಎಂಆರ್ ಸಿಎಲ್ ಖಾತೆ ನನ್ನ ಬಳಿಯೇ ಇದ್ದರೆ, ಅಭಿವೃದ್ಧಿ ಕಾರ್ಯ ಸಾಧ್ಯವಾಗುತ್ತದೆ ಎಂದು ಹೊಸ ಬೇಡಿಕೆ ಇಟ್ಟಿದ್ದು, ಆದ್ರೆ ಎಚ್‍ಡಿಕೆ ಈ ಬೇಡಿಯನ್ನು ದೂರ ತಳ್ಳುತ್ತಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.