ಸಾಮಾನ್ಯವಾಗಿ ಭೂಮಿ ಮೇಲಿರುವ ಪ್ರತಿಯೊಂದು ಅಂಶವು ತನ್ನದೇ ಆದ ವಿಭಿನ್ನ ಬಣ್ಣ ಹಾಗೂ ಗುಣವನ್ನು ಹೊಂದಿದೆ. ಆ ಬಣ್ಣಕ್ಕೆ ತಕ್ಕಂತೆ ಅದು ವಿಭಿನ್ನವಾಗಿ ವರ್ತಿಸುತ್ತದೆ. ಉದಾಹರಣೆಗೆ ಸಾಮಾನ್ಯವಾಗಿ ನಾವು ನೀರನ್ನ ಹೆಚ್ಚಾಗಿ ನೀಲಿ ಬಣ್ಣದಿಂದ ಗುರುತಿಸುತ್ತೇವೆ. ಆದರೆ ಅದಕ್ಕೆ ಬಣ್ಣವೇ ಇಲ್ಲ. ಬದಲಾಯಿಸಿದಂತಹ ಬಣ್ಣಕ್ಕೆ ಅದು ತಿರುಗುತ್ತದೆ. ಅದರಂತೆ ಒಂದು ಅಚ್ಚರಿಯೊಂದು ಆಗಸದಲ್ಲಿ ಕಂಡುಬಂದಿದೆ. ಏನಿದು? ಇದರ ಹಿಂದಿನ ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂಗ್ಲೆಂಡ್ ನ ಪಶ್ಚಿಮ ಮಿಡ್ ಲ್ಯಾಂಡ್ ಪ್ರದೇಶದಲ್ಲಿ ಬರ್ಮಿಂಗ್ ಹ್ಯಾಮ್ ಎಂಬ ನಗರವಿದೆ. ಇಂಗ್ಲೆಂಡ್ ನ ಎರಡನೆ ಅತಿ ದೊಡ್ಡ ನಗರವಾಗಿರುವ ಇದು ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ವಾಣಿಜ್ಯ ಕೇಂದ್ರವಾಗಿ ಹೆಸರು ಪಡೆದಿದೆ.
ಇತ್ತೀಚಿಗಷ್ಟೇ ಈ ಬರ್ಮಿಂಗ್ ಹ್ಯಾಮ್ ನಗರದಲ್ಲಿ ಅಚ್ಚರಿಯೊಂದು ಕಂಡುಬಂದಿದೆ. ಪಶ್ಚಿಮ ಮಿಡ್ ಲ್ಯಾಂಡ್ ನ ಜನರು ಆಕಾಶದಲ್ಲಿ ಅಚ್ಚರಿಯೊಂದನ್ನು ಗಮನಿಸಿದರು. ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿರುವ ಆಕಾಶವು ವಿಭಿನ್ನವಾಗಿ ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಇದನ್ನು ಕಂಡು ಅಚ್ಚರಿಗೊಂಡ ಜನರು ಒಂದೆಡೆ ಆಶ್ಚರ್ಯ ಪಟ್ಟರೆ, ಇನ್ನೊಂದೆಡೆ ಇದು ವಿಭಿನ್ನವಾದ ಸೂರ್ಯಾಸ್ತವಾಗಿರಬಹುದು ಎಂದು ಭಾವಿಸಿದರು. ಗುಲಾಬಿ ಆಕಾಶದ ಪರಿಣಾಮ ಬರ್ಮಿಂಗ್ ಹ್ಯಾಮ್ ಸೇರಿದಂತೆ ಸ್ಟಾಫರ್ಡ್ ಶೈರ್ ನ ಸುತ್ತಮುತ್ತಲಿನ ಪಟ್ಟಣಗಳ ಮೇಲೆ ಗುಲಾಬಿ ಛಾಯೆ ಆವರಿಸಿತ್ತು. ಆಕಾಶದಲ್ಲಿನ ಮೋಡಗಳು ಹಾಗೂ ಹಿಮವು ಕೂಡ ಗುಲಾಬಿ ಬಣ್ಣಕ್ಕೆ ತಿರುಗಿತ್ತು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿತ್ತು. ರೋಮಾಂಚಕ ದೃಶ್ಯದಂತೆ ಬರ್ಮಿಂಗ್ ಹ್ಯಾಮ್ ತುಂಬೆಲ್ಲಾ ಅದ್ಭುತ ವಾತಾವರಣ ಸೃಷ್ಟಿಸಿತ್ತು. ಜೊತೆಗೆ ಬೆರಗುಗೊಳಿಸುವಂತಹ ಅಚ್ಚರಿಯ ದೃಶ್ಯಗಳು ಕಂಡುಬಂದಿದ್ದವು. ಈ ಕುರಿತು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಮೋಡಗಳು ಮತ್ತು ಹಿಮವು ಆಕಾಶವನ್ನು ಗುಲಾಬಿ ಬಣ್ಣಕ್ಕೆ ತಿರುಗಿಸಿದೆ. ಇನ್ನು ಕೆಲವರು ಹಿಮ ಹೆಚ್ಚು ನೀಲಿ ಬಳಕನ್ನು ಚದುರಿಸುತ್ತದೆ. ಇದರಿಂದಾಗಿ ಆಕಾಶದಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಗಳು ಹೆಚ್ಚು ಗೋಚರಿಸುತ್ತವೆ ಎಂದು ಕೂಡ ಅಭಿಪ್ರಾಯಪಟ್ಟಿದ್ದಾರೆ.
ಗುಲಾಬಿ ಬಣ್ಣಕ್ಕೆ ತಿರುಗಲು ಕಾರಣ
ಬರ್ಮಿಂಗ್ ಹ್ಯಾಮ್ ಸಿಟಿ ಫುಟ್ಬಾಲ್ ಕ್ಲಬ್ (BCFC)ನ ನೆಲೆಯಾದ ಸೇಂಟ್ ಆಂಡ್ರ್ಯೂಸ್ ಕ್ರೀಡಾಂಗಣದಲ್ಲಿ ಗುಲಾಬಿ ಬಣ್ಣದ LED ಫ್ಲಡ್‌ಲೈಟ್‌ಗಳನ್ನು ಹಾಕಲಾಗಿತ್ತು. ಇದು ಹೊರಹೊಮ್ಮಿ ಆಕಾಶದೆತ್ತರಕ್ಕೆ ಪ್ರತಿಫಲಿಸಿತು. ಹಿಮ ಹಾಗೂ ಮೋಡಗಳ ಮೇಲೆಯೂ ಪ್ರತಿಬಿಂಬ ಬೀರಿ, ಎಲ್ಲೆಡೆ ಚದುರಿಹೋಗಿತ್ತು. ಆ ದಿನ ಸಂಜೆ Football Assosiation ಕಪ್ ಪಂದ್ಯದ ಸಮಯದಲ್ಲಿ, ಕ್ರೀಡಾಂಗಣದಲ್ಲಿ ಗ್ರೋ ಲೈಟ್‌ಗಳು ಹಾಗೂ LED ಫ್ಲಡ್‌ಲೈಟ್‌ಗಳನ್ನು ಹಾಕಲಾಗಿತ್ತು. ಇವುಗಳ ಪ್ರತಿಬಿಂಬ ಕ್ರೀಡಾಂಗಣದ ಜೊತೆಗೆ ಇಡೀ ಆಕಾಶವನ್ನೇ ಬೆಳಗಿಸಿದವು.
ಹವಾಮಾನ ಶಾಸ್ತ್ರಜ್ಞರ ಮಾಹಿತಿ ಪ್ರಕಾರ, ಹಿಮ ಮತ್ತು ಮೋಡ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ. ಸ್ಟೇಡಿಯಂನಲ್ಲಿ ಹಾಕಿದ್ದ ಲೈಟ್‌ಗಳ ಪರಿಣಾಮದಿಂದಾಗಿ ವೆಸ್ಟ್ ಮಿಡ್‌ಲ್ಯಾಂಡ್ಸ್ ಸ್ಕೈಲೈನ್‌ನಾದ್ಯಂತ ಗುಲಾಬಿ ಬಣ್ಣವೇ ಕಾಣುತ್ತಿತ್ತು. ದಟ್ಟವಾದ ಮೋಡವು ಕೃತಕ ಬೆಳಕನ್ನು ಸೆರೆಹಿಡಿದು ಅದನ್ನು ಇನ್ನಷ್ಟು ತೀವ್ರಗೊಳಿಸಿತು.
ಗೊರೆಟ್ಟಿ ಚಂಡಮಾರುತದ ಪರಿಣಾಮ ಮಿಡ್‌ಲ್ಯಾಂಡ್ಸ್‌ನಾದ್ಯಂತ ಹಿಮದ ಎಚ್ಚರಿಕೆ ನೀಡಲಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಜೊತೆಗೆ ಸಾವಿರಾರು ಮನೆಗಳಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಈ ಚಂಡಮಾರುತದ ಪರಿಣಾಮ ಗುಲಾಬಿ ಬಣ್ಣ ಹೆಚ್ಚು ಪ್ರಕಾಶಮಾನವಾಗಿ, ನಗರದ ತುಂಬೆಲ್ಲ ಬೀರಿತ್ತು. ಈ ದೃಶ್ಯ ಎಲ್ಲೆಡೆ ಉತ್ಸಾಹದಂತೆ ಮನೆ ಮಾಡಿತ್ತು. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಇದನ್ನು `Disney Pink’ ಎಂದು ವರ್ಣಿಸಿದ್ದರು.
ಬೆಳಕು ಹಿಮ ಮತ್ತು ನೀರಿನಿಂದ ಚದುರಿಹೋಗುತ್ತದೆ. ಆಗ ಅದರ ಪ್ರತಿಫಲನೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಜನರಿಗೆ ಇದರಿಂದ ಅಚ್ಚರಿಯಾಗಿದ್ದೇಕೆ?
ಆಕಾಶದಲ್ಲಿ ಮೂಡಿದ ಬಣ್ಣವು ಅಸ್ವಾಭಾವಿಕವಾಗಿ ಕಾಣುತ್ತಿತ್ತು. ಆದರೆ ಒಂದು ರೀತಿಯಲ್ಲಿ ಸಿನಿಮೀಯವಾಗಿ ಭಾಸವಾಯಿತು. ಅಲ್ಲದೇ ಕೆಲವು ಫ್ಯಾಂಟಸಿ ಚಿತ್ರಗಳಂತೆ ಕಂಡುಬಂದಿದೆ. ಇನ್ನು ಕೆಲವರು ಅಪರೂಪದ ದೃಶ್ಯದಿಂದಾಗಿ ಭಯಭೀತರಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುವಂತೆ ಮಾಡಿತ್ತು.
ಈ ರೀತಿ ಗುಲಾಬಿ ಆಕಾಶ ಅಪಾಯಕಾರಿಯಾಗಿರಲಿಲ್ಲ. ಅದು ಸರಳವಾಗಿ ಭೌತಶಾಸ್ತ್ರವಾಗಿತ್ತು. ಬೆಳಕು ಹಿಮ ಮತ್ತು ಮೋಡ ಜೊತೆಗೆ ಸಮ್ಮಿಲನಗೊಂಡಾಗ ಅದರ ಬಣ್ಣ ಪ್ರತಿಫಲಿಸುತ್ತದೆ. ಪ್ರಕೃತಿ ವೈಜ್ಞಾನಿಕ ನಿಯಮಗಳನ್ನು ಅನುಸರಿಸುತ್ತದೆ. ಅದರಂತೆ ತಂತ್ರಜ್ಞಾನ ಮತ್ತು ಹವಾಮಾನ ಕೂಡ ಮಿಶ್ರಗೊಂಡಿದೆ.









